ಪ್ರಧಾನ ಸುದ್ದಿ

ಪಕ್ಷದ ಚಿನ್ಹೆಗಾಗಿ ಒಗ್ಗೂಡಲು ಸಿದ್ಧರಾದ ಎಐಎಡಿಎಂಕೆ ಶಾಸಕರು, ಪನ್ನೀರ್ ಸೆಲ್ವಂಗೆ ಪ್ರಧಾನ ಕಾರ್ಯದರ್ಶಿ ಹುದ್ದೆ?

Srinivasamurthy VN

ಚೆನ್ನೈ: ಮತ್ತೊಂದು ರಾಜಕೀಯ ಹೈಡ್ರಾಮಾಕ್ಕೆ ತಮಿಳುನಾಡು ಸಾಕ್ಷಿಯಾಗಿದ್ದು, ಅಕ್ರಮ ಹಣ ಹಂಚಿಕೆ ಆರೋಪದ ಮೇರೆಗೆ ಆರ್ ಕೆ ನಗರ ಉಪ ಚುನಾವಣೆ ಮುಂದೂಡಿಕೆಯಾದ ಬೆನ್ನಲ್ಲೇ ಇಬ್ಭಾಗವಾಗಿರುವ ಎಐಎಡಿಎಂಕೆ  ಪಕ್ಷವನ್ನು ಮತ್ತೆ ಒಗ್ಗೂಡಿಸಲು ಸಿಎಂ ಪಳನಿ ಸ್ವಾಮಿ ಮುಂದಾಗಿದ್ದಾರೆ.

ಚುನಾವಣಾ ಆಯೋಗ ಹಿಂದಕ್ಕೆ ಪಡೆದಿರುವ ಪಕ್ಷದ ಎರಡು ಎಲೆಗಳ ಚಿನ್ಹೆಯನ್ನು ಶತಾಯಗತಾಯ ಮರಳಿ ವಾಪಸ್ ಪಡೆಯಲೇ ಬೇಕು ಎಂದು ನಿರ್ಧರಿಸಿರುವ ಸಿಎಂ ಪಳನಿ ಸ್ವಾಮಿ ಇದಕ್ಕಾಗಿ ತಮ್ಮ ನೇತೃತ್ವದಲ್ಲೇ ನಿನ್ನೆ  ತಡರಾತ್ರಿ ಸಂಪುಟ ಸಚಿವರ ತುರ್ತು ಸಭೆ ನಡೆಸಿದ್ದು, ಈ ವೇಳೆ ಬಹುತೇಕ ಸಚಿವರು ಪನ್ನೀರ್ ಸೆಲ್ವಂ ಬಣದೊಂದಿಗೆ ಸಂಧಾನ ಮಾತುಕತೆ ನಡೆಸುವಂತೆ ಸಿಎಂಗೆ ಸಲಹೆ ನೀಡಿದ್ದರು ಎಂದು ತಿಳಿದುಬಂದಿದೆ. ಅಂತೆಯೇ ಸ್ವತಃ  ಸಿಎಂ ಪಳನಿ ಸ್ವಾಮಿ ಕೂಡ ರಾಜ್ಯದಲ್ಲಿ ನೆಲಕಚ್ಚಿರುವ ಪಕ್ಷದ ಗೌರವ ಹಾಗೂ ಅಸ್ತಿತ್ವ ಉಳಿಸಿಕೊಳ್ಳಲು ಯಾವುದೇ ರೀತಿಯ ಕಠಿಣ ಕ್ರಮ ಕೈಗೊಳ್ಳಲೂ ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ.

ಪಳನಿ ಸ್ವಾಮಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ತಮಿಳುನಾಡಿನಲ್ಲಿ ಕೆಲ ರಾಜಕೀಯ ಬೆಳವಣಿಗೆಗಳಿಂದಾಗಿ ಜನತೆ ಬೇಸತ್ತಿದ್ದು, ಸರ್ಕಾರದಲ್ಲಿ ಶಶಿಕಲಾ ಬಣದ ಹಸ್ತಕ್ಷೇಪದಿಂದಾಗಿ ರಾಜ್ಯದಲ್ಲಿ ಎಐಎಡಿಎಂಕೆ ಪಕ್ಷದ  ವರ್ಚಸ್ಸು ಹಾಳಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದಲ್ಲದೇ ಸರ್ಕಾರದ ಸಚಿವರ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ಮತ್ತು ಮತದಾರರಿಗೆ ಹಂಚಲು ಇಟ್ಟಿದ್ದ ಹಣ ಪತ್ತೆ ಬಳಿಕ ಪಕ್ಷದ ಗೌರವ ಮತ್ತಷ್ಟು ಹಾಳಾಗಿದ್ದು,  ಇದರ ಬೆನ್ನಲ್ಲೇ ಪಕ್ಷದ ಚಿನ್ಹೆ ಪಡೆಯಲು ಟಿಟಿವಿ ದಿನಕರನ್ ಟುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ಕೂಡ ಪಕ್ಷಕ್ಕೆ ಮತ್ತಷ್ಟು ಮುಳುವಾಗಿದೆ.

ಅಂತೆಯೇ ಸರ್ಕಾರದಲ್ಲಿ ಶಶಿಕಲಾ ಬಣದ ಪ್ರಭಾವ ಹೆಚ್ಚಾಗಿದ್ದು, ಸಿಎಂ ಪಳನಿ ಸ್ವಾಮಿ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಹೇಳಲಾಗುತ್ತಿದೆ. ಸರ್ಕಾರದ ಅಧಿಕಾರಿಗಳ ಪಳನಿ ಸ್ವಾಮಿ ಆದೇಶಗಳನ್ನು ಸರಿಯಾಗಿ  ಪಾಲಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದೇ ಕಾರಣಕ್ಕಾಗಿ ಪಳನಿ ಸ್ವಾಮಿ ಸ್ಥಾನ ತ್ಯಜಿಸಲು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ.

ಪನ್ನೀರ್ ಸೆಲ್ವಂಗೆ ಪ್ರಧಾನ ಕಾರ್ಯದರ್ಶಿ ಹುದ್ದೆ?

ಇನ್ನು ಮಾಜಿ ಸಿಎಂ ಪನ್ನೀರ್ ಸೆಲ್ವಂ ಮತ್ತು ಸಿಎಂ ಪಳನಿ ಸ್ವಾಮಿ ಸಂಧಾನ ಮಾತುಕತೆ ಯಶಸ್ವಿಯಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಇದಕ್ಕಾಗಿ ಸಂಧಾನ ಸೂತ್ರವೊಂದನ್ನು ಸಿದ್ಧಪಡಿಸಲಾಗಿದೆ. ಅದರಂತೆ ಸಿಎಂ ಆಗಿ ಪಳನಿ  ಸ್ವಾಮಿ ಅವರನ್ನು ಮುಂದುವರೆಸಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಒ ಪನ್ನೀರ್ ಸೆಲ್ವಂ ಅವರನ್ನು ಆಯ್ಕೆ ಮಾಡುವ ಸಂಧಾನ ಸಿದ್ಧಪಡಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ಸಂಧಾನ ಮಾತುಕತೆಯಲ್ಲಿ ಪನ್ನೀರ್ ಸೆಲ್ವಂ ಬಣ  ಇದಕ್ಕೆ ಒಪ್ಪಿಗೆ ನೀಡಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಪನ್ನೀರ್ ಸೆಲ್ವಂ ಅವರಿಗೆ 135 ಶಾಸಕರ ಪೈಕಿ 110 ಶಾಸಕರ ಬೆಂಬಲವಿದ್ದು, ಇಂದು ನಡೆಯುವ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ.

SCROLL FOR NEXT