ಪ್ರಧಾನ ಸುದ್ದಿ

ಮರುನಾಮಕರಣ ಮಾಡಿದರೆ ಅಕ್ರಮ ಸಕ್ರಮವಾಗುವುದಿಲ್ಲ; ಅರುಣಾಚಲ ಭಾರತದ ಅವಿಭಾಜ್ಯ ಅಂಗ: ಚೀನಾಗೆ ಭಾರತದ ಪ್ರತಿಕ್ರಿಯೆ

Guruprasad Narayana
ನವದೆಹಲಿ: ಅರುಣಾಚಲ ಪ್ರದೇಶದ ಆರು ನಗರಗಳಿಗೆ ಮರುನಾಮಕರಣ ಮಾಡಿರುವ ಚೈನಾದ ಕ್ರಮಕ್ಕೆ ಉತ್ತರಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗೋಪಾಲ್ ಬಗಲಿ, ಇದು ಅಕ್ರಮವಾಗಿ ತೆಕ್ಕೆಗೆ ತೆಗೆದುಕೊಂಡಿರುವ ಪ್ರದೇಶವನ್ನು ಸಕ್ರಮವಾಗಿಸುವುದಿಲ್ಲ ಎಂದು ಗುರುವಾರ ಹೇಳಿದ್ದಾರೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಕೂಡ ಅವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ. 
"ಮರುನಾಮಕರಣ ಅಥವಾ ಹೊಸದಾಗಿ ಹೆಸರುಗಳನ್ನು ಕಂಡುಹಿಡಿಯುವುದರಿಂದ ಅಕ್ರಮವಾಗಿ ತೆಕ್ಕೆಗೆ ತೆಗೆದುಕೊಂಡಿರುವ ಪ್ರದೇಶವನ್ನು ಸಕ್ರಮವಾಗಿಸುವುದಿಲ್ಲ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ" ಎಂದು ಬಗಲಿ ಹೇಳಿರುವುದಾಗಿ ಎ ಎನ್ ಐ ಸುದ್ದಿ ಏಜೆನ್ಸಿ ವರದಿ ಮಾಡಿದೆ. 
ಇದಕ್ಕೂ ಮುಂಚೆ ಪ್ರತಿಕ್ರಿಯಿಸಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಚೈನಾಗೆ ಎಚ್ಚರಿಸಿದ್ದರು. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದ್ದು, ನಮ್ಮ ನಗರಗಳಿಗೆ ಮರುನಾಮಕರಣ ಮಾಡುವ ಅಧಿಕಾರ ಯಾವ ದೇಶಕ್ಕೂ ಇಲ್ಲ ಎಂದಿದ್ದರು. 
ಅರುಣಾಚಲ ಪ್ರದೇಶದ ಆರು ನಗರಗಳಿಗೆ ನೂತನ ಅಧಿಕೃತ ಹೆಸರುಗಳನ್ನು ನೀಡಿರುವುದಾಗಿ ಬುಧವಾರ ಚೈನಾ ಘೋಷಿಸಿತ್ತು. 
ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಯಾದವ್ ಬಗೆಗೆ ಕೂಡ ಪ್ರತಿಕ್ರಿಯಿಸಿರುವ ಬಗಲಿ, ಅವರ ಇರುವಿಕೆ ಮತ್ತು ಆರೋಗ್ಯದ ಬಗ್ಗೆ ಕಳವಳ ಇದೆ ಎಂದಿದ್ದಾರೆ. ರಾಯಭಾರಿ ಕಚೇರಿ ಮೂಲಕ ಅವರ ಸಂಪರ್ಕಕ್ಕೆ ಅವಕಾಶ ಕೋರಿ ಪಾಕಿಸ್ತಾನಕ್ಕೆ ೧೪ ಬಾರಿ ಮನವಿ ಮಾಡಲಾಗಿದೆ ಮತ್ತು ಮತ್ತೊಮ್ಮೆ ಮಾಡಲಾಗುತ್ತದೆ ಎಂದು ಕೂಡ ಅವರು ಹೇಳಿದ್ದಾರೆ.
SCROLL FOR NEXT