ನವದೆಹಲಿ: ಕೇರಳ ಪೊಲೀಸ್ ಮಹಾ ನಿರ್ದೇಶಕ ಹುದ್ದೆಯಿಂದ ವಜಾಗೊಂಡಿದ್ದ ಟಿ ಪಿ ಸೇನ್ ಕುಮಾರ್ ಅವರನ್ನು ಹುದ್ದೆಯಲ್ಲಿ ಮರು ಸ್ಥಾಪಿಸುವಂತೆ ಸೋಮವಾರ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ತಕ್ಷಣದಿಂದ ಜಾರಿಗೆ ಬರುವಂತೆ ಸೇನ್ ಕುಮಾರ್ ಅವರನ್ನು ಪೊಲೀಸ್ ಮಹಾ ನಿರ್ದೇಶ ಹುದ್ದೆಗೆ ನೇಮಕ ಮಾಡುವಂತೆ ನ್ಯಾ.ಮದನ್ ಬಿ ಲೋಕೂರ್ ಮತ್ತು ದೀಪಕ್ ಗುಪ್ತಾ ಅವರನ್ನು ಒಳಗೊಂಡ ಪೀಠ ಆದೇಶ ನೀಡಿದ್ದು, ಇದರಿಂದಾಗಿ ಪ್ರಸ್ತೂತ ಪೊಲೀಸ್ ಮಹಾ ನಿರ್ದೇಶಕ ಲೋಕನಾಥ್ ಬೆಹೆರಾ ಅವರ ಸ್ಥಾನ ಕುತ್ತು ಬಂದಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸೇನ್ ಕುಮಾರ್ ಅವರನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಸೇನ್ ಕುಮಾರ್ ಅವರು, ಪೊಲೀಸ್ ಮಹಾ ನಿರ್ದೇಶಕರ ಹುದ್ದೆಯ ಅವಧಿ ಕನಿಷ್ಠ ಎರಡು ವರ್ಷವಾಗಿದ್ದು, ತಮ್ಮನ್ನು ಒಂದು ವರ್ಷಕ್ಕೆ ತೆಗೆದು ಹಾಕುವ ಮೂಲಕ ಕೇರಳ ಪೊಲೀಸ್ ಕಾಯ್ಕೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ ಎಂದು ವಾದಿಸಿದ್ದರು.
ಸೇನ್ ಕುಮಾರ್ ವಾದವನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್, ಕೇರಳದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಸೇನ್ ಕುಮಾರ್ ಅವರನ್ನು ಅನುಚಿತವಾಗಿ ನಡೆಸಿಕೊಂಡಿದೆ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಈ ಹಿಂದೆ ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಕೇರಳ ಸರ್ಕಾರಕ್ಕೆ ಪೊಲೀಸ್ ಮಹಾ ನಿರ್ದೇಶಕ ಹುದ್ದೆಯ ಕಾರ್ಯಾವಧಿಯು ಕನಿಷ್ಠ ಎರಡು ವರ್ಷಕ್ಕೆ ಖಚಿತವಾಗಿರಬೇಕು ಮತ್ತು ಅವರನ್ನು ರಾಜ್ಯದಲ್ಲಿನ ಅಧಿಕಾರಸ್ಥರು ತಮ್ಮ ಇಷ್ಟಾನುಸಾರ ಅವರನ್ನು ಬೇಕೆಂದಾಗ ಬೇಕೆಂದಲ್ಲಿಗೆ ಎತ್ತಂಗಡಿ ಮಾಡಬಾರದು ಎಂದು ಹೇಳಿತ್ತು.