ಬೀಚ್ ರೆಸಾರ್ಟ್ ನಲ್ಲಿ ಎಐಎಡಿಎಂಕೆ ಶಾಸಕರ ವಿಚಾರಣೆ ನಡೆಸಿದ ಪೊಲೀಸರು
ತಮಿಳುನಾಡು ಪೊಲೀಸರು ಶನಿವಾರ ಬೀಚ್ ರೆಸಾರ್ಟ್ ಗೆ ಭೇಟಿ ನೀಡಿ, ಅಲ್ಲಿ ತಂಗಿರುವ ಎಐಎಡಿಎಂಕೆ ಶಾಸಕರ ಬಗ್ಗೆ ವಿಚಾರಣೆ ನಡೆಸಿದ್ದಾರೆ....
ಚೆನ್ನೈ: ತಮಿಳುನಾಡು ಪೊಲೀಸರು ಶನಿವಾರ ಬೀಚ್ ರೆಸಾರ್ಟ್ ಗೆ ಭೇಟಿ ನೀಡಿ, ಅಲ್ಲಿ ತಂಗಿರುವ ಎಐಎಡಿಎಂಕೆ ಶಾಸಕರ ಬಗ್ಗೆ ವಿಚಾರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಡಳಿತರೂಢ ಪಕ್ಷದ ಶಾಸಕರ ಬಗ್ಗೆ ವರದಿ ನೀಡುವಂತೆ ಮದ್ರಾಸ್ ಹೈಕೋರ್ಟ್ ಸೂಚಿಸಿದ ಹಿನ್ನೆಲೆಯಲ್ಲಿ ಇಂದು ಪೊಲೀಸರು ರೆಸಾರ್ಟ್ ಗೆ ಭೇಟಿ ನೀಡಿದ್ದು, ಶಾಸಕರನ್ನು ಒತ್ತಾಯಪೂರ್ವಕವಾಗಿ ರೆಸಾರ್ಟ್ ನಲ್ಲಿರಿಸಲಾಗಿದೆಯೇ? ಮೊಬೈಲ್ ಕಿತ್ತಿಕೊಳ್ಳಲಾಗಿದೆಯೇ? ಮುಕ್ತವಾಗಿ ಓಡಾಡಲು ಬಿಡುತ್ತಿಲ್ಲವೇ? ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಸುಮಾರು 120 ಶಾಸಕರು ಪ್ರಸ್ತುತ ಖಾಸಗಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದು, ಕಳೆದೆರಡು ದಿನಗಳಿಂದ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ.
ಎಐಎಡಿಎಂಕೆ ಶಾಸಕರನ್ನು ಒತ್ತೆಯಾಳಾಗಿರಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಇಬ್ಬರು ವಕೀಲರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಶಾಸಕರ ಬಗ್ಗೆ ವರದಿ ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ಫೆ.12ಕ್ಕೆ ಮುಂದೂಡಿದೆ.