ತಮಿಳುನಾಡು ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಬಣ ಸೇರುವ ಮೂಲಕ ಇಬ್ಬರು ಎಐಡಿಎಂಕೆ ಲೋಕಸಭಾ ಸದಸ್ಯರು ಶನಿವಾರ ತಮ್ಮ ಬೆಂಬಲ ಸೂಚಿಸಿದ್ದಾರೆ.
ಕೃಷ್ಣಗಿರಿ ಕ್ಷೇತ್ರದ ಅಶೋಕ್ ಕುಮಾರ್ ಮತ್ತು ನಾಮಕ್ಕಲ್ ಪ್ರತಿನಿಧಿಸುವ ಸುಂದರಂ, ಪನ್ನೀರ್ ಸೆಲ್ವಂ ಗೃಹಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ.
ಇದಕ್ಕೂ ಮುಂಚೆ ರಾಜ್ಯಸಭಾ ಸದಸ್ಯ ವಿ ಮೈತ್ರೇಯನ್ ಪನ್ನೀರ್ ಸೆಲ್ವಂ ಬಣ ಸೇರಿದ್ದರು.
ವರದಿಗಾರರೊಂದಿಗೆ ಮಾತನಾಡಿದ ಅಶೋಕ್ ಕುಮಾರ್ ಇನ್ನಿತರ ಎಐಡಿಎಂಕೆ ಸಂಸದರು ಕೂಡ ಪನ್ನೀರ್ ಸೆಲ್ವಂ ಕೈಜೋಡಿಸಲಿದ್ದಾರೆ ಎಂದಿದ್ದಾರೆ.
ಲೋಕಸಭೆಯಲ್ಲಿ ಎಐಡಿಎಂಕೆಯ ೩೭ ಸದಸ್ಯರಿದ್ದಾರೆ.
ಮಂಗಳವಾರ ರಾತ್ರಿ ಐಐಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಅಲಂಕರಿಸಲು ಪ್ರಯತ್ನಿಸುತ್ತಿರುವ ವಿ ಕೆ ಶಶಿಕಲಾ ವಿರುದ್ಧ ತಿರುಗಿ ಬಿದ್ದಿದ್ದ ಪನ್ನೀರ್ ಸೆಲ್ವಂ, ತಮ್ಮ ಮೇಲೆ ಒತ್ತಡ ಹಾಕಿ ರಾಜೀನಾಮೆ ಪಡೆಯಲಾಗಿತ್ತು ಎಂದು ದೂರಿದ್ದರು. ಹಾಗು ರಾಜೀನಾಮೆ ಹಿಂಪಡೆಯುವ ಇಂಗಿತ ವ್ಯಕ್ತಪಡಿಸಿದ್ದರು.
ತದನಂತರ ಐವರು ಶಾಸಕರು, ಒಬ್ಬ ಸಂಸದ, ಪಕ್ಷದ ಹಿರಿಯ ರಾಜಕಾರಣಿಗಳು, ಮಾಜಿ ಶಾಸಕರು ಮತ್ತಿತರು ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ಸೂಚಿಸಿದ್ದರು.