ಪಳನಿಸ್ವಾಮಿ - ಪನ್ನೀರ್ ಸೆಲ್ವಂ
ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರುತ್ತಿದ್ದಂತೆ ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದ್ದು, ನಿಮ್ಮ ನಿಮ್ಮ ಬೆಂಬಲಿಗ ಶಾಸಕರ ಪಟ್ಟಿ ನೀಡುವಂತೆ ರಾಜ್ಯಪಾಲರ ಸಿಎಚ್ ವಿದ್ಯಾಸಾಗರ್ ಅವರು ಬುಧವಾರ ಎಐಎಡಿಎಂಕೆಯ ಎರಡು ಬಣಗಳ ನಾಯಕರಿಗೆ ಸೂಚಿಸಿದ್ದಾರೆ.
ವಿದ್ಯಾಸಾಗರ್ ರಾವ್ ಅವರು ನಿಮ್ಮ ಬೆಂಬಲಿಗರ ಪಟ್ಟಿ ನೀಡುವಂತೆ ಹಂಗಾಮಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಹಾಗೂ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ, ಶಶಿಕಲಾ ಆಪ್ತ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರಿಗೆ ಸೂಚಿಸಿದ್ದಾರೆ. ಅಲ್ಲದೆ ರಾತ್ರಿ 8.30ಕ್ಕೆ ತಮ್ಮನ್ನು ಭೇಟಿ ಮಾಡಲು ಪನ್ನೀರ್ ಸೆಲ್ವಂ ಅವರಿಗೆ ಸಮಯ ನೀಡಿದ್ದಾರೆ.
ಈ ಮಧ್ಯೆ ಪಳನಿಸ್ವಾಮಿ ಭೇಟಿಗೆ ರಾಜ್ಯಪಾಲರು ಯಾವುದೇ ಸಮಯ ನೀಡಿಲ್ಲ. ಆದರೂ ಪಳನಿಸ್ವಾಮಿ ಅವರು ತಮ್ಮ 10 ಬೆಂಬಲಿಗರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಲು ರಾಜಭವನಕ್ಕೆ ತೆರಳುತ್ತಿದ್ದಾರೆ.
ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಈಗಾಗಲೇ ಕಾನೂನು ತಜ್ಞರಿಂದ ಸಲಹೆ ಪಡೆದಿದ್ದು, ಸರ್ಕಾರ ರಚನೆಯ ಹಕ್ಕು ಮಂಡಿಸುವ ಇಬ್ಬರು ನಾಯಕರ ಪೈಕಿ ಅತಿ ಹೆಚ್ಚು ಶಾಸಕರು ಯಾರನ್ನು ಬೆಂಬಲಿಸುತ್ತಾರೋ ಅವರಿಗೆ ಸರ್ಕಾರ ರಚನೆಗೆ ಅವಕಾಶ ನೀಡುವ ಸಾಧ್ಯತೆ ಇದೆ.