ಗಂಗಾವತಿ: ದುಷ್ಕರ್ಮಿಗಳು ನಡೆಸಿದ್ದ ಗುಂಡಿನ ದಾಳಿಗೆ ಗಂಗಾವತಿ ಮೂಲದ ಯುವಕ ಸೈಯದ್ ಫರೂಕ್ ಬಾಷಾ (23) ಎಂಬುವವರು ಮೃತಪಟ್ಟಿಸುವ ಘಟನೆ ದಕ್ಷಿಣ ಸುಡಾನ್ ರಾಷ್ಟ್ರದ ಉವಾ ನಗರದಲ್ಲಿ ಶುಕ್ರವಾರ ನಡೆದಿದೆ.
ಶುಕ್ರವಾರವಾದ್ದರಿಂದ ಫರೂಕ್ ಅವರು ಉವಾ ನಗರದಲ್ಲಿರುವ ಮಸೀದೆಗೆ ತೆರೆಳಿದ್ದರು. ನಮಾಜ್ ಮುಗಿಸಿದ ಬಳಿಕ ತಮ್ಮ ಕಾರಿನಲ್ಲಿ ಹೋಗಿದ್ದಾರೆ. ಈ ವೇಳೆ ದುಷ್ಕರ್ಮಿಗಳ ತಂಡವೊಂದು ಸ್ಥಳಕ್ಕೆ ಬಂದು ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ನಂತರ ಕಾರು ಚಾಲಕ ಕಾರನ್ನು ನಿಲ್ಲಿಸದೆಯೇ ಹೋಗಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ನಡೆಸಿದ್ದರ ಪರಿಣಾಮ ಸೈಯದ್ ಫರೂಕ್ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆಂದು ಮೂಲಗಳು ತಿಳಿಸಿವೆ.
ಮೃತಪಟ್ಟಿರುವ ಸೈಯದ್ ಫರೂಕ್ ಗಂಗಾವತಿ ಮೂಲದವರಾಗಿದ್ದು, ಪೋಷಕರು ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ನೆಲೆಯೂರಿದ್ದಾರೆ.
ಸೈಯದ್ ಫರೂಕ್ ಅವರ ತಂದೆ ಖ್ವಾದ್ರಿ ಅವರು ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಫೆ.17 ಶುಕ್ರವಾರ ನನ್ನ ಮಗ ನಮಾಜ್ ಮಾಡಲೆಂದು ಕಾರಿನಲ್ಲಿ ಹೋಗಿದ್ದಾನೆ. ನಮಾಜ್ ಮುಗಿಸಿ ಹಿಂತಿರುಗಿ ಬರುವಾಗ ದುಷ್ಕರ್ಮಿಗಳ ತಂಡವೊಂದು ಕಾರನ್ನು ನಿಲ್ಲಿಸುವಂತೆ ಹೇಳಿದ್ದಾರೆ. ಈ ವೇಳೆ ಕಾರಿನ ಚಾಲಕ ಕಾರನ್ನು ನಿಲ್ಲಿಸದೆಯೇ ಹೋಗಲು ಮುಂದಾಗಿದ್ದಾನೆ. ಈ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆಂದು ನಮಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದು ಹೇಳಿಕೊಂಡಿದ್ದಾರೆ.
ಸೈಯದ್ ಅವರ ತಂದೆ ಖ್ವಾದ್ರಿ ಅವರಿಗೆ ಒಬ್ಬಳು ಮಗಳು ಹಾಗೂ ಮೂವರು ಗಂಡು ಮಕ್ಕಳಿದ್ದಾರೆ. ಮೃತಪಟ್ಟ ಸೈಯದ್ ಫರೂಕ್ ಎರಡನೇ ಪುತ್ರನಾಗಿದ್ದು, ಸೂಡಾನ್ ನಲ್ಲಿರುವ ಒಮಾಸ್ಕಿ ಇನ್ಫ್ರಾಟೆಕ್ ಕಂಪನಿಯಲ್ಲಿ ಕಳೆದ ಎರಡು ವರ್ಷಗಳಿಂದ ಸೂಪರ್ ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಭಾರತಕ್ಕೆ ಬಂದಿದ್ದ ಫರೂಕ್ ತಮ್ಮ ಕುಟುಂಬಸ್ಥರೊಂದಿಗೆ ಕಾಲ ಕಳೆದು ಮತ್ತೆ ಸುಡಾನ್'ಗೆ ತೆರಳಿದ್ದರು. ಹತ್ಯೆಗೆ ಈ ವರೆಗೂ ಕಾರಣಗಳು ತಿಳಿದುಬಂದಿಲ್ಲ.
ಮೃತದೇಹವನ್ನು ಸ್ವದೇಶಕ್ಕೆ ತರಲು ನೆರವು ನೀಡುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಬಳಿ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದು, ಈಗಾಗಲೇ ಸುಷ್ಮಾ ಸ್ವರಾಜ್ ಅವರು ಮನವಿಗೆ ಸ್ಪಂದಿಸಿದ್ದಾರೆ.
ಕುಟುಂಬಸ್ಥರು ಆಂಧ್ರಪ್ರದೇಶದಲ್ಲಿ ನೆಲೆಯೂರಿರುವ ಕಾರಣ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೃತದೇಹವನ್ನು ರವಾನಿಸಲಾಗುತ್ತಿದೆ ಎಂದು ತಿಳಿದುಬಂದಿದೆ.