ಚೆನ್ನೈ: ತಮಿಳುನಾಡು ಆಡಳಿತೂರಢ ಎಐಎಡಿಎಂಕೆಯಲ್ಲಿನ ರಾಜಕೀಯ ಜಟಾಪಟಿಯ ನಂತರ ಇದೀಗ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಆಸ್ತಿಗಾಗಿ ಮಹಾ ಕದನ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಜಯಲಲಿತಾ ಅವರ ಸೋದರನ ಮಗ(ಸೋದರಳಿಯ) ದೀಪಕ್ ಜಯಕುಮಾರ್ ಅವರು, ಪೋಯಸ್ ಗಾರ್ಡನ್ ನ ಬಂಗಲೆ ಮತ್ತು ಇತರೆ ಆಸ್ತಿಗಳು ತನಗೆ ಸೇರಿದ್ದು ಎಂದು ಹೇಳಿದ್ದಾರೆ.
ನ್ಯೂಸ್ ಎಕ್ಸ್ ಟಿವಿ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ದೀಪಕ್ ಅವರು, ನಾನು ನಮ್ಮ ಅತ್ತೆ ಜಯಲಲಿತಾಗಾಗಿ 100 ಕೋಟಿ ರುಪಾಯಿ ದಂಡ ಕಟ್ಟುತ್ತೇನೆ. ನನ್ನ ಬಳಿ ಹಣ ಇಲ್ಲ. ಯಾವುದಾದರೂ ಆಸ್ತಿ ಮಾರಾಟ ಮಾಡುತ್ತೇನೆ. ಅದು ಯಾವ ಅಸ್ತಿ ಅಂತ ಮಾತ್ರ ಹೇಳಲ್ಲ. ಆದರೆ ಪೋಯಸ್ ಗಾರ್ಡನ್ ನನಗೆ ಮತ್ತು ನನ್ನ ಸಹೋದರಿ ದೀಪಾಗೆ ಸೇರಿದ್ದು. ಬೇರೆ ಯಾರೂ ಅದರ ಮಾಲೀಕತ್ವ ಸ್ಥಾಪಿಸಲು ಸಾಧ್ಯವಿಲ್ಲ. ನಾನು ಹಾಗೂ ದೀಪಾ ಮಾತ್ರ ನನ್ನ ಅತ್ತೆಯ ಆಸ್ತಿಗೆ ಹಕ್ಕುದಾರರು ಎಂದಿದ್ದಾರೆ.
ಇದೇ ವೇಳೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಸಂಬಂಧಿಕರಾದ ಟಿಟಿವಿ ದಿನಕರನ್ ಮತ್ತು ವೆಂಕಟೇಶ್ ರಿಂದ ಪಕ್ಷ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದರೊಂದಿಗೆ ಜಯಲಿತಾರ ಸೋದರ ಸಂಬಂಧಿಗಳು ಹಾಗೂ ಶಶಿಕಲಾ ಸಂಬಂಧಿಕರ ಮಧ್ಯೆಯೇ ಅಮ್ಮನ ಉತ್ತರಾಧಿಕಾರ ಕದನ ಏರ್ಪಡುವ ಸೂಚನೆ ನೀಡಿದ್ದಾರೆ.
ನನಗೆ ರಾಜಕಿಯ ಉದ್ದೇಶಗಳೇನಿಲ್ಲ. ಶಶಿಕಲಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಒಪ್ತೀನಿ. ಆದರೆ ದಿನಕರನ್ ಹಾಗೂ ವೆಂಕಟೇಶ್ ಗೆ ಪ್ರಮುಖ ಸ್ಥಾನಗಳನ್ನು ಕೊಟ್ಟಿರೋದು ಹೇಗೆ ಒಪ್ಪಲು ಸಾಧ್ಯ? ದೀಪಾ ಬೇಕಾದರೆ ಪಕ್ಷದಲ್ಲಿ ಸ್ಥಾನ ಕೇಳಬಹುದು. ಅದರೆ ಇವರಿಬ್ಬರಿಗೆ ಆ ಹಕ್ಕಿಲ್ಲ. ಕುಟುಂಬ ರಾಜಕಾರಣ ತರುವ ಯತ್ನ ನಡೆಯುತ್ತಿದೆ ಎಂದು ದೀಪಕ್ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics