ವಾರಣಾಸಿ: ರಾಮಜಾಸ್ ಕಾಲೇಜು ಘರ್ಷಣೆಯ ಹಿನ್ನಲೆಯಲ್ಲಿ ಉಂಟಾಗಿರುವ ಬೆಳವಣಿಗೆಗಳ ಬಗ್ಗೆ ದೆಹಲಿ ಪೊಲೀಸರೊಂದಿಗೆ ಸಂಪರ್ಕದಲ್ಲಿರುವುದಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಸೋಮವಾರ ಹೇಳಿದ್ದಾರೆ.
ದೆಹಲಿ ಪೊಲೀಸರು ಎಚ್ಚರಿಕೆಯಿಂದ ಈ ಪ್ರಕರಣವನ್ನು ನಿಭಾಯಿಸುವಂತೆ ಸೂಚನೆ ನೀಡಿರುವುದಾಗಿ ಅವರು ಪತ್ರಕರ್ತರಿಗೆ ತಿಳಿಸಿದ್ದಾರೆ.
"ಏನೂ ತಪ್ಪು ನಡೆಯದಂತೆ ನಿಯಂತ್ರಣದಲ್ಲಿ ಕೆಲಸ ಮಾಡಲು ದೆಹಲಿ ಪೊಲೀಸರಿಗೆ ಸೂಚಿಸಿದ್ದೇನೆ. ಪೊಲೀಸ್ ಕಮಿಷನರ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ" ಎಂದು ಅವರು ಹೇಳಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ರಾಮಜಾಸ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸೆಮಿನಾರ್ ಒಂದನ್ನು ರದ್ದು ಮಾಡುವಂತೆ ಫೆಬ್ರವರಿ ೨೨ ರಂದು ಎಬಿವಿಪಿ ಕಾರ್ಯಕರ್ತರು ದಾಂಧಲೆ ನಡೆಸಿದ್ದರು ನಂತರ ಇದನ್ನು ವಿರೋಧಿಸಿ ನಡೆಸಿದ್ದ ಪ್ರತಿಭಟನೆಗೂ ಅಡ್ಡಿಪಡಿಸಿದ್ದರು.
ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಮೇಲೆ ಎಬಿವಿಪಿ ಕಾರ್ಯಕರ್ತರು ಹಲ್ಲೆ ಮಾಡುವುದನ್ನು ತಡೆಯದಿದ್ದಕ್ಕೆ ದೆಹಲಿ ಪೋಲೀಸರ ಮೇಲೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಹಲ್ಲೆ ಆರೋಪದ ಮೇಲೆ ಕಳೆದ ವಾರ ಮೂವರು ಪೊಲೀಸರನ್ನು ವಜಾಗೊಳಿಸಲಾಗಿತ್ತು.