ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯುವತಿಯರ ಮೇಲೆ ದಾಳಿ ಮಾಡಿ ಅತ್ಯಾಚಾರ ಬೆದರಿಕೆ ಹಾಕಿದ 'ಎಬಿವಿಪಿ ಗುಂಡಾಗಳನ್ನು' ಬಂಧಿಸುವಂತೆ ದೆಹಲಿ ಪೊಲೀಸರಿಗೆ ಮಂಗಳವಾರ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
"ಈ ಹೇಯ ಕೃತ್ಯದ ಬಗ್ಗೆ ಶೀಘ್ರ ಗಮನ ಹರಿಸಿ ಮತ್ತು ಈ ರಾಷ್ಟ್ರೀಯತೆಯ ಹೆಸರಿನಲ್ಲಿ ಮಹಿಳೆಯರ ವಿರುದ್ಧ ಹಿಂಸೆ ನಡೆಸಿದ ಎಬಿವಿಪಿ ಗುಂಡಾಗಳನ್ನು ಬಂಧಿಸಿ" ಎಂದು ಎಎಪಿ, ದೆಹಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರಿಗೆ ಆಗ್ರಹಿಸಿದೆ.
ಫೆಬ್ರವರಿ ೨೨ ರಂದು ಅಖಿಲ ಭಾರತ ವಿದ್ಯಾರ್ಥಿ ಪರಿಷದ್ ನಡೆಸಿದ ಹಿಂಸೆಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎಎಪಿ ಪಕ್ಷದ ನಾಯಕರಾದ ಅತಿಷಿ ಮರ್ಲೆನ, ಶಾಸಕರಾದ ಅಲ್ಕಾ ಲಾಂಬಾ ಮತ್ತು ಸರಿತಾ ಸಿಂಗ್, ಪಾಟ್ನಾಯಕ್ ಅವರಿಗೆ ಪತ್ರ ಬರೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಎಬಿವಿಪಿಯನ್ನು ಟೀಕಿಸಿದ ಕಾರ್ಗಿಲ್ ಹುತಾತ್ಮನ ಪುತ್ರಿ, ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಗುರ್ಮೆಹೆರ್ ಕೌರ್ ಅವರಿಗೆ ಬಂದಿರುವ ರೇಪ್ ಬೆದರಿಕೆಯನ್ನು ಉಲ್ಲೇಖಿಸಿ, ಪೊಲೀಸರು ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ವಿಫಲರಾಗಿದ್ದಾರೆ ಎಂದು ಎಎಪಿ ದೂರಿದೆ.
"ರಾಮಜಾಸ್ ಕಾಲೇಜಿನಲ್ಲಿ ಫೆಬ್ರವರಿ ೨೧ ರಂದು ನಡೆಯಬೇಕಿದ್ದ ಸಾಹಿತ್ಯ ಕಾರ್ಯಕ್ರಮಕ್ಕೆ ತಡೆಯೊಡ್ಡಿ, ಎಬಿವಿಪಿ ದಾಂಧಲೆ ನಡೆಸಿದೆ" ಎಂದು ಕೂಡ ಪತ್ರದಲ್ಲಿ ತಿಳಿಸಲಾಗಿದೆ.
"ಮುಂದಿನ ದಿನ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಕೂಡ ಮಹಿಳಾ ವಿದ್ಯಾರ್ಥಿಯರ ಮೇಲೆ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯ ಮತ್ತು ರೇಪ್ ಬೆದರಿಕೆ ಹಾಕಿದ್ದಾರೆ" ಎಂದು ಎಎಪಿ ತಿಳಿಸಿದೆ.
"ಅಮೂಲ್ಯ ಅವರೇ ಲಿಂಗ ಸಮಾನತೆ ಮತ್ತು ಹಕ್ಕುಗಳ ಬಗ್ಗೆ ಯಾವುದೇ ರಾಜಿ ಇಲ್ಲ ಎಂಬ ಅಂಶವನ್ನು ನೀವು ಒಪಿಕೊಳ್ಳುತ್ತೀರಾ ಎಂದು ನಂಬಿದ್ದೇವೆ" ಎಂದು ಕೂಡ ಪಾತ್ರದಲ್ಲಿ ತಿಳಿಸಲಾಗಿದೆ.