ರಾಷ್ಟ್ರೀಯ ಬೇಹುಗಾರಿಕೆಯ ನಿರ್ದೇಶಕನ ಹುದ್ದೆಗೆ ಟ್ರಂಪ್ ಹೆಸರಿಸಿರುವ ಅಭ್ಯರ್ಥಿ ಡ್ಯಾನ್ ಕೋಟ್ಸ್
ವಾಷಿಂಗ್ಟನ್: ಬೇಹುಗಾರಿಕೆಯ ಹಿರಿಯ ಹುದ್ದೆಗೆ ನೇಮಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿಸಿರುವ ಅಭ್ಯರ್ಥಿ, ಒಂದೇ ರಾಕೆಟ್ ನಲ್ಲಿ ೧೦೪ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಭಾರತದ ಸಾಧನೆಯನ್ನು ಓದಿ ಆಘಾತವಾಯಿತು ಎಂದು ಪ್ರತಿಕ್ರಿಯಿಸಿದ್ದಾರೆ.
"ಆ ದಿನ ಭಾರತ ಒಂದೇ ರಾಕೆಟ್ ನಲ್ಲಿ ೧೦೦ ಉಪಗ್ರಹಗಳನ್ನು ಬಾಹ್ಯಾಕಾಶ ಕಕ್ಷೆಗೆ ಉಡಾಯಿಸಿದ್ದನ್ನು ಓದಿ ಆಘಾತವಾಯಿತು" ಎಂದು ಮಾಜಿ ಸೆನೆಟರ್ ಡ್ಯಾನ್ ಕೋಟ್ಸ್ ಹೇಳಿದ್ದಾರೆ. ರಾಷ್ಟ್ರೀಯ ಬೇಹುಗಾರಿಕೆಯ ನಿರ್ದೇಶಕನ ಹುದ್ದೆಗೆ ಧೃಢೀಕರಣ ವಿಚಾರಣೆಯ ವೇಳೆಯಲ್ಲಿ ಅಮೆರಿಕಾದ ಸಂಸದರ ಮುಂದೆ ಅವರು ಈ ಮಾತುಗಳನ್ನಾಡಿದ್ದಾರೆ.
ಅಮೆರಿಕಾ ಇಂತಹ ವಿಷಯಗಳಲ್ಲಿ ಹಿಂದುಳಿಯಲು ಸಾಧ್ಯವಿಲ್ಲ ಎಂದು ಕೂಡ ಹೇಳಿದ್ದಾರೆ.
"ಅವುಗಳ ಗಾತ್ರ ಸಣ್ಣದಿರಬಹುದು ಮತ್ತು ಅವುಗಳ ಕೆಲಸಗಳು ಬೇರೆ ಇರಬಹುದು ಆದರೆ ಒಂದೇ ರಾಕೆಟ್ ಅವುಗಳನ್ನು ಕಳುಹಿಸುವುದೆಂದರೆ, ನನಗೆ ತಿಳಿದ ಪ್ರಕಾರ ೧೦೪ ಉಪಗ್ರಹಗಳನ್ನು" ಎಂದು ಕೋಟ್ಸ್ ಹೇಳಿದ್ದಾರೆ. ಅವರು ಆ ಹುದ್ದೆಗೆ ನೇಮಕಗೊಂಡರೆ ಸಿಐಎ ಸೇರಿದಂತೆ ಅಮೆರಿಕಾದ ಎಲ್ಲಾ ಬೇಹುಗಾರಿಕೆ ಸಂಸ್ಥೆಗಳನ್ನು ಅವರು ಪ್ರತಿನಿಧಿಸಲಿದ್ದಾರೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಫೆಬ್ರವರಿ ೧೫ ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಏಕಕಾಲಕ್ಕೆ ಒಂದೇ ರಾಕೆಟ್ ಮೂಲಕ ೧೦೪ ಉಪಗ್ರಹಗಳನ್ನು ಬಾಹ್ಯಾಕಾಶ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics