ಕೀಟಲೆಗಾಗಿ ಚುಂಬಿಸಿ ದೌರ್ಜನ್ಯ ನಡೆಸುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ: ದೆಹಲಿ ಪೊಲೀಸ್
ಹುಡುಗಿಯರನ್ನು ಕೀಟಲೆಗಾಗಿ ಚುಂಬಿಸಿ, ಅಲ್ಲಿಂದ ಪರಾರಿಯಾಗಿ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಹಾಕಿ ಲೈಂಗಿಕ ದೌರ್ಜನ್ಯವೆಸಗುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ದೆಹಲಿ
ನವದೆಹಲಿ: ಹುಡುಗಿಯರನ್ನು ಕೀಟಲೆಗಾಗಿ ಚುಂಬಿಸಿ, ಅಲ್ಲಿಂದ ಪರಾರಿಯಾಗಿ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಹಾಕಿ ಲೈಂಗಿಕ ದೌರ್ಜನ್ಯವೆಸಗುತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ದೆಹಲಿ ಪೊಲೀಸರು ಶನಿವಾರ ಹೇಳಿದ್ದಾರೆ.
"ಈ ವಿಷಯದಲ್ಲಿ ನಾವು ತನಿಖೆ ಪ್ರಾರಂಭಿಸಿದ್ದೇವೆ. ಈ ಪ್ರಕರಣದ ತಾಂತ್ರಿಕ ಆಯಾಮಗಳ ಬಗ್ಗೆಯೂ ಕೆಲಸ ಮಾಡುತ್ತಿದ್ದು, ಸೇವೆ ನೀಡುವ ಸಂಸ್ಥೆಯನ್ನು ಸಂಪರ್ಕಿಸಿದ್ದೇವೆ"ಎಂದು ಜಂಟಿ ಪೊಲೀಸ್ ಆಯುಕ್ತ ದೀಪೇಂದ್ರ ಪಾಠಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಂತ್ರಸ್ತರು ಮುಂದೆ ಬಂದು ಪೊಲೀಸರಿಗೆ ದೂರು ನೀಡಬೇಕು ಎಂದು ಕೂಡ ಅವರು ಹೇಳಿದ್ದಾರೆ.
'ಕ್ರೇಜಿ ಸಮ್ಮಿಟ್' ಎಂಬ ಯೂಟ್ಯೂಬ ಚಾನೆಲ್ ನಲ್ಲಿ ಈ ಆರೋಪಿ, ಇಂತಹ ಚುಂಬನದ ಕೀಟಲೆಯ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದ. ಈ ಆರೋಪಿಯ ಪೂರ್ಣ ಹೆಸರು ಇನ್ನು ತಿಳಿಯಬೇಕಿದ್ದು, ತನ್ನ ಕೃತ್ಯಕ್ಕೆ ಕ್ಷಮೆ ಕೋರಿ ಎರಡು ದಿನಗಳ ಹಿಂದೆ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದ. ತನ್ನ ಕೀಟಲೆ ಗಂಭೀರ ತಿರುವು ಪಡೆದುಕೊಳ್ಳಬಹುದೆಂಬ ಸುಳಿವಿರಲಿಲ್ಲ ಎಂದು ಈ ವಿಡಿಯೋದಲ್ಲಿ ತಿಳಿಸಿದ್ದ.