ಪ್ರಧಾನ ಸುದ್ದಿ

ಪೆಟ್ರೋಲ್ ಬಂಕ್ ಗಳಲ್ಲಿ ಕಾರ್ಡ್ ಬಳಕೆ ಅಬಾಧಿತ; ಗ್ರಾಹಕರಿಗೆ ತಾತ್ಕಾಲಿಕ ರಿಲೀಫ್!

Srinivasamurthy VN

ನವದೆಹಲಿ: ಪೆಟ್ರೋಲ್ ಬಂಕ್ ಗಳಲ್ಲಿ ಕಾರ್ಡ್ ಗಳ ಬಳಕೆ ಸ್ಥಗಿತಗೊಳ್ಳುವ ಆತಂಕ ಎದುರಿಸಿದ್ದ ಗ್ರಾಹಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಸರ್ಕಾರದ ಆಶ್ವಾಸನೆ ಹಿನ್ನಲೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಕಾರ್ಡ್ ಬಳಕೆ  ಮೇಲಿನ ನಿರ್ಬಂಧ ನಿರ್ಧಾರವನ್ನು ಮುಂದೂಡಿದ್ದಾರೆ.

ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಜನವರಿ 13ರವರೆಗೂ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಮೂಲಕ ಹಣ ಪಾವತಿ ಮಾಡಿದರೆ ಹೇರಲಾಗುತ್ತಿದ್ದ ಶೇ.1ರಷ್ಟು ವಹಿವಾಟು ಶುಲ್ಕವನ್ನು ರದ್ದುಗೊಳಿಸಿರುವ ಹಿನ್ನಲೆಯಲ್ಲಿ ಪೆಟ್ರೋಲ್  ಬಂಕ್ ಮಾಲೀಕರ ಸಂಘ ಕೂಡ ತಾತ್ಕಾಲಿಕವಾಗಿ ಅಂದರೆ ಜನವರಿ 13ರವರೆಗೂ ಕಾರ್ಡ್ ಗಳನ್ನು ಸ್ವೀಕರಿಸುವುದಾಗಿ ಹೇಳಿಕೆ ನೀಡಿದೆ. ಆದರೆ ಕೇಂದ್ರ ಸರ್ಕಾರದ ಮುಂದಿನ ನಿರ್ಧಾರವನ್ನು ಪರಿಶೀಲಿಸಿ ಬಳಿಕ ಮುಂದಿನ  ನಿರ್ಧಾರಕ್ಕೆ ಬರುತ್ತೇವೆ ಎಂದು ಬಂಕ್ ಮಾಲೀಕರು ಹೇಳಿದ್ದಾರೆ. ಹೀಗಾಗಿ ಪೆಟ್ರೋಲ್ ಬಂಕ್ ಗಳಲ್ಲಿ ಕಾರ್ಡ್ ಬಳಕೆ ಮೇಲೆ ನಿರ್ಬಂಧ ಆತಂಕದಿಂದ ಗ್ರಾಹಕರು ತಾತ್ಕಾಲಿಕವಾಗಿ ಪಾರಾಗಿದ್ದಾರೆ ಎಂದು ಹೇಳಬಹುದು.

ಇನ್ನು ಈ ಬಗ್ಗೆ ಭಾನುವಾರ ಮಧ್ಯರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು‌, "ವಿಷಯವನ್ನು ಇತ್ಯರ್ಥ ಪಡಿಸಲು ಯತ್ನಿಸುತ್ತಿದ್ದೇವೆ. ಸದ್ಯದ ಮಟ್ಟಿಗೆ ಜನವರಿ 13ರ  ವರೆಗೆ ಶುಲ್ಕ ಹೇರಿಕೆಗೆ ತಡೆ ನೀಡಲಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ. ಅಂತೆಯೇ ಕೇಂದ್ರ ಸಚಿವರ ಸಭೆ ಬಳಿಕ ಮಾತನಾಡಿದ ಅಖೀಲ ಕರ್ನಾಟಕ ಪೆಟ್ರೋಲಿಯಂ ವ್ಯಾಪಾರಿಗಳು ಹಾಗೂ ಬೆಂಗಳೂರು ಪೆಟ್ರೋಲಿಯಂ ಡೀಲರ್  ಸಂಘದ ಅಧ್ಯಕ್ಷ ಬಿ.ಆರ್‌. ರವೀಂದ್ರನಾಥ್‌ ಅವರು, ಕೇಂದ್ರ ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಕಾರ್ಡ್‌ ಸ್ವೀಕಾರ ಸ್ಥಗಿತಗೊಳಿಸುವ ತೀರ್ಮಾನವನ್ನು ನಾವು ಮುಂದೂಡಿದ್ದೇವೆ. ಹೀಗಾಗಿ ಸೋಮವಾರದಿಂದ ಯಥಾ ಪ್ರಕಾರ ಕಾರ್ಡ್‌  ಸ್ವೀಕಾರ ಮುಂದುವರಿಸಲಿದ್ದೇವೆ. ಸರ್ಕಾರದ ಮುಂದಿನ ನಡೆ ಆಧರಿಸಿ ನಮ್ಮ ಮುಂದಿನ ನಿಲುವು ಪ್ರಕಟಿಸಲಿದ್ದೇವೆ" ಎಂದು ಹೇಳಿದ್ದಾರೆ.

ಈ ಹಿಂದೆ ಗ್ರಾಹಕರಿಂದ ಕ್ರೆಡಿಟ್‌ ಕಾರ್ಡ್‌ ಮೂಲಕ ಬಂಕ್ ಗಳು ಸ್ವೀಕರಿಸುವ ಹಣಕ್ಕೆ ಶೇ. 1ರಷ್ಟು ಹಾಗೂ ಡೆಬಿಟ್‌ ಕಾರ್ಡ್‌ ಮೂಲಕ ಸ್ವೀಕರಿಸುವ ಹಣಕ್ಕೆ ಶೇ.0.25ರಿಂದ ಶೇ.1ರ ವರೆಗೆ ವಹಿವಾಟು ಶುಲ್ಕ ವಿಧಿಸಲಾಗುತ್ತಿತ್ತು.  ಪ್ರಮುಖವಾಗಿ ಬ್ಯಾಂಕಿಂಗ್ ಕ್ಷೇತ್ರ ಮೂರು ಬ್ಯಾಂಕುಗಳಾದ ಐಸಿಐಸಿಐ, ಎಕ್ಸಿಸ್‌, ಎಚ್‌ಡಿಎಫ್ ಸಿ ಬ್ಯಾಂಕ್‌ಗಳು ಶುಲ್ಕಗಳನ್ನು ಹೇರಿದ್ದವು. ಇದರಿಂದ ಸಿಟ್ಟಾಗಿರುವ ಪೆಟ್ರೋಲಿಯಂ ಉತ್ಪನ್ನಗಳ ವಿತರಕರು, ಕಾರ್ಡ್‌ ಪಾವತಿಯನ್ನು  ಸೋಮವಾರದಿಂದ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದರು.

SCROLL FOR NEXT