ಅಗರ್ತಲಾ: ರೈಲ್ವೆ ಇಲಾಖೆ ಧಾರ್ಮಿಕ ಪ್ರವಾಸಿಗಳಾಯಿಗಾಗಿ ಫೆಬ್ರವರಿ ೧೭ ರಂದು ಹೊಸ ರೈಲೊಂದಕ್ಕೆ ಚಾಲನೆ ನೀಡಲಿದೆ. ಬುಧವಾರ ಇಲಾಖೆ ಈ ಘೋಷಣೆ ಮಾಡಿದ್ದು, ಗೌಹಾಟಿಯಿಂದ ಹೊರಡಲಿರುವ ಈ ರೈಲು, ಪಶ್ಚಿಮ ಬಂಗಾಳ ಮತ್ತು ಒರಿಸ್ಸಾದ ತೀರ್ಥಕ್ಷೇತ್ರಗಳನ್ನು ಸುತ್ತಾಡಲಿದೆ.
ಆಸ್ಥಾ ಸರ್ಕ್ಯೂಟ್ ಪ್ರವಾಸಿ ರೈಲನ್ನು, ಈಶಾನ್ಯ ಸೀಮಾ ರೈಲ್ವೆ ಮತ್ತು ಭಾರತೀಯ ರೈಲ್ವೆ ಹಾಗು ಪ್ರವಾಸಿ ಕಾರ್ಪೊರೇಷನ್ ಜಂಟಿಯಾಗಿ ಮುನ್ನಡೆಸಲಿವೆ.
"ದೇಶದ ಪೂರ್ವ ಭಾಗದ ಈ ಪ್ರಮುಖ ತೀರ್ಥ ಕ್ಷೇತ್ರಗಳನ್ನು ಕೈಗೆಟಕುವ ದರದಲ್ಲಿ ಪ್ರವಾಸಿಗರಿಗೆ ದಕ್ಕುವಂತೆ ಮಾಡಲಿದೆ" ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಗಂಗಾಸಾಗರ, ಶ್ರೀ ಸ್ವಾಮಿ ನಾರಾಯಣ ದೇವಸ್ಥಾನ, ಕಾಳಿ ಘಾಟ್, ಕೋಲ್ಕತ್ತಾದ ಬಿರ್ಲಾ ದೇವಾಲಯ, ಪೂರಿ ಜಿಲ್ಲೆಯ ಜಗನ್ನಾಥ ದೇವಾಲಯ ಮತ್ತು ಕೋನಾರ್ಕ್ ದೇವಸ್ಥಾನ ಹಾಗು ಭುವನೇಶ್ವರದ ಲಿಂಗರಾಜ ದೇವಸ್ಥಾನಗಳನ್ನು ಈ ರೈಲು ಸುತ್ತಲಿದೆ.
ಗೌಹಾಟಿಯಿಂದ ಹೊರಡುವ ಈ ರೈಲು ಆರು ರಾತ್ರಿ ಮತ್ತು ಏಳು ದಿನಗಳ ನಂತರ ಅಲ್ಲಿಗೆ ಹಿಂದಿರುಗಲಿದ್ದು, ಇದಕ್ಕೆ ದರವನ್ನು ಒಬ್ಬರಿಗೆ ೬೧೬೧ ರೂ ನಿಗದಿಪಡಿಸಲಾಗಿದೆ.