ಪ್ರಧಾನ ಸುದ್ದಿ

ಜಲ್ಲಿಕಟ್ಟು: ಸುಗ್ರೀವಾಜ್ಞೆ ಹೊರತಾಗಿಯೂ ಶಾಶ್ವತ ಕ್ರಮಕ್ಕೆ ಆಗ್ರಹ; ಮರೀನಾ ಬೀಚ್ ನಲ್ಲಿ ಮುಂದುವರೆದ ಪ್ರತಿಭಟನೆ

Srinivasamurthy VN

ಚೆನ್ನೈ: ಜಲ್ಲಿಕಟ್ಟು ಮೇಲಿನ ನಿಷೇಧ ತೆರವಿಗೆ ಆಗ್ರಹಿಸಿ ಕಳೆದೊಂದು ವಾರದಿಂದ ತಮಿಳುನಾಡಿನಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಭಾನುವಾರವೂ ಮುಂದುವರೆದಿದ್ದು, ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಹೊರತಾಗಿಯೂ  ಪ್ರತಿಭಟನಾಕಾರರು ಶಾಶ್ವತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ.

ಚೆನ್ನೈನ ಮರೀನಾ ಬೀಚ್ ನಲ್ಲಿ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ತಮಿಳು ಸಂಘಟನೆಗಳ ಪ್ರತಿಭಟನೆ ಮುಂದುವರೆಸಲಾಗುತ್ತಿದ್ದು, ತಮಿಳುನಾಡು ಸಿಎಂ ಒ ಪನ್ನೀರ್ ಸೆಲ್ವಂ ಅವರ ಮನವಿಯನ್ನು ತಳ್ಳಿ ಹಾಕಿರುವ  ಪ್ರತಿಭಟನಾಕಾರರು ಜಲ್ಲಿಕಟ್ಟು ಕುರಿತಂತೆ ಶಾಶ್ವತ ಕಾನೂನು ರೂಪಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಈ ನಡುವೆ ಸುಗ್ರೀವಾಜ್ಞೆ ತಂದು ಜಲ್ಲಿಕಟ್ಟು ಆಚರಣೆಗೆ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿದ್ದಂತೆಯೇ ತಮಿಳುನಾಡಿನಾದ್ಯಂತ ಜಲ್ಲಿಕಟ್ಟು ಆಚರಣೆ ಮತ್ತೆ ಗರಿಗೆದರಿದ್ದು, ವಿವಿಧ ಜಿಲ್ಲೆಗಳಲ್ಲಿ ಗೂಳಿ ಕಾಳಗಕ್ಕೆ ವೇದಿಕೆ  ಸಜ್ಜುಗೊಳಿಸಲಾಗುತ್ತಿದೆ. ತಮಿಳುನಾಡಿನ ತಿರುಚ್ಚಿ, ಮಧುರೈ, ಅಲಂಗಾನಲ್ಲೂರ್, ಚೆನ್ನೈ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜಲ್ಲಿಕಟ್ಟು ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು 500ಕ್ಕೂ ಹೆಚ್ಚು ಗೂಳಿಗಳಿಗೆ  ಈಗಾಗಲೇ ಪೂಜೆ ನೆರವೇರಿಸಲಾಗಿದ್ದು, ಗೂಳಿ ಓಡುವ ಪಥ ಸಿದ್ಧಪಡಿಸಲಾಗಿದೆ.

ಅಂತೆಯೇ ಮುಂಜಾಗ್ರತಾ ಕ್ರಮವಾಗಿ ಹಲವು ಆ್ಯಂಬುಲೆನ್ಸ್ ಗಳು, ವೈದ್ಯರ ತಂಡ ಹಾಗೂ ಪಶು ತಜ್ಞರು ಜಲ್ಲಿಕಟ್ಟು ನಡೆಯುವ ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.

SCROLL FOR NEXT