ಪ್ರಧಾನ ಸುದ್ದಿ

ಖಾದಿ ಕ್ಯಾಲೆಂಡರ್ ನಲ್ಲಿ ಮೋದಿ ಫೋಟೋ; ಕಾರ್ಮಿಕರು, ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯ

Guruprasad Narayana
ಮುಂಬೈ: ೨೧೦೭ರ ಕ್ಯಾಲೆಂಡರ್ ಗಳು ಮತ್ತು ಡೈರಿಗಳಲ್ಲಿ ಮಹಾತ್ಮಾ ಗಾಂಧಿಯವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳು ಬದಲಿಸಿರುವ ನಡೆಯನ್ನು ಖಾದಿ ಗ್ರಾಮೋದ್ಯೋಗ ಪ್ರಾಧಿಕಾರ (ಕೆವಿಐಸಿ) ಅಧಿಕಾರಿಗಳು ಬೆಂಬಲಿಸಿದ್ದು, ಈ ನಡೆಯನ್ನು ವಿರೋಧಿಸಿದ್ದ ಖಾದಿ ಕಾರ್ಮಿಕರಿಗೆ ಸೆಡ್ಡು ಹೊಡೆದಿದ್ದಾರೆ. 
ಈ ಮೂಲಕ ಜನವರಿ ೨೬ ರಂದು ಆಯೋಜಿಸಿದ್ದ ೨೮೦೦ ಜನರ ಕೆವಿಐಸಿ ಕಾರ್ಮಿಕರ ಪ್ರತಿಭಟನೆಯನ್ನು ಪರೋಕ್ಷವಾಗಿ ವಿರೋಧಿಸಿದ್ದಾರೆ. 
೩೦೦ ಸದಸ್ಯರಿರುವ ಕೆವಿಐಸಿ ಅಧಿಕಾರಿಗಳ ಸಂಘ ಕೆವಿಐಸಿ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೆನಾ ಅವರಿಗೆ ಪತ್ರ ಬರೆದಿದ್ದು, ಇತ್ತೀಚಿನ ಬೆಳವಣಿಗೆಗಳು ರಾಜಕೀಯಪೂರಿತವಾಗಿದ್ದು, ಸಂಸ್ಥೆಯ ಹೆಸರಿಗೆ ಮಸಿ ಬಳಿಯಲು ದುರುದ್ದೇಶದಿಂದ ಕೂಡಿವೆ ಎಂದಿದ್ದಾರೆ. 
"ದುಷ್ಕರ್ಮಿಗಳು ಮತ್ತು ಸಂಸ್ಥೆಯ ವಿರೋಧಿ ಜನರಿಂದ ಕೆವಿಐಸಿಗೆ ಯಾವುದೇ ಪ್ರಮಾಣಪತ್ರ ಬೇಕಾಗಿಲ್ಲ" ಎಂದು ಕೂಡ ಸಂಘದ ಪ್ರಧಾನ ಕಾರ್ಯದರ್ಶಿ ಬಾಬುಲ್ ಮಂಡಲ್ ಕಳುಹಿಸಿರುವ ಪತ್ರದಲ್ಲಿ ಬರೆಯಲಾಗಿದೆ. 
ಅಧ್ಯಕ್ಷರಿಗೆ ಬೆಂಬಲವನ್ನು ಕೂಡ ಅಧಿಕಾರಿಗಳು ಸೂಚಿಸಿದ್ದಾರೆ. ಈ ಬೆಳವಣಿಗೆಯನ್ನು ಕೂಡಲೇ ತಡೆಯದಿದ್ದರೆ ಕಳವಳಕಾರಿ ಎಂದಿರುವ ಮಂಡಲ್ "ಈ ಪ್ರಕರಣವನ್ನು ಬೆಳೆಯಲು ಬಿಟ್ಟರೆ, ಅದು ಕೆವಿಐಸಿ ಮತ್ತು ಗ್ರಾಮಗಳ ಕಲಾ ಕಾರ್ಮಿಕರಿಗೆ ಮಾರಕವಾಗಲಿದೆ. 
"ನಮಗೆ ಇದರಿಂದ ತೀವ್ರ ನೋವಾಗಿದೆ. ಈ ವಿವಾದವನ್ನು ಅತಿ ಶೀಘ್ರದಲ್ಲೇ ಬಗೆಹರಿಸಿಕೊಳ್ಳಲು ಒಂದು ಒಮ್ಮತದ ಒಪ್ಪಂದಕ್ಕೆ ಬರಬೇಕು" ಎಂದು ಕೂಡ ಅವರು ಹೇಳಿದ್ದಾರೆ. 
ಶಿವ ಸೇನಾ ಸಂಸದ ಆನಂದರಾವ್ ಅದ್ಸುಲ್ ಮುಂದಾಳತ್ವದ ಖಾದಿ ಗ್ರಾಮೋದ್ಯೋಗ ಕರ್ಮಚಾರಿ ಸೇನಾ (ಕೆಜಿಕೆಸ್) ಸಂಸ್ಥೆ ಇನ್ನುಮುಂದೆ ಕೆವಿಐಸಿ ಕ್ಯಾಲೆಂಡರ್ ಗಳು ಮತ್ತು ಡೈರಿಗಳಲ್ಲಿ ಮಹಾತ್ಮ ಗಾಂಧಿ ಅವರ ಚಿತ್ರ ಪ್ರಮುಖವಾಗಿ ಕಾಣಿಸಿಕೊಳ್ಳಬೆಕು ಎಂದು ಆಗ್ರಹಿಸಿದ್ದಾರೆ. 
೨೦೧೭ ರ ಕ್ಯಾಲೆಂಡರ್ ಗಳು ಮತ್ತು ಡೈರಿಗಳಲ್ಲಿ ಮಹಾತ್ಮಾ ಗಾಂಧಿ ವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳು ಬದಲಿಸಿರುವ ನಡೆಯನ್ನು ವಿರೋಧಿಸಿ ಮೌನದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕಾರ್ಮಿಕರ ವಿರುದ್ಧ ನೀಡಲಾಗಿರುವ ನೋಟಿಸ್ ಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಕೂಡ ಕೆಜಿಕೆಸ್ ಆಗ್ರಹಿಸಿದೆ. 
ಕೆವಿಐಸಿ ಯಾವುದೇ ಕಾರ್ಮಿಕರಿಗೆ ಕಿರುಕುಳ ನೀಡಿದರೆ ಅಖಿಲ ಭಾರತ ಪ್ರತಿಭಟನೆ ಮಾಡುವುದಾಗಿ ಕೂಡ ತಿಳಿಸಿದೆ. 
ಕ್ಯಾಲೆಂಡರ್ ಗಳು ಮತ್ತು ಡೈರಿಗಳಲ್ಲಿ ಮಹಾತ್ಮಾ ಗಾಂಧಿ ವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳು ಬದಲಿಸಿರುವ ಕೆವಿಐಸಿ ನಡೆಯನ್ನು ಬಿಜೆಪಿ ಮೈತ್ರಿ ಪಕ್ಷ ಶಿವಸೇನೆ ಸೇರಿದಂತೆ ಹಲವು ಪಕ್ಷಗಳು ಖಂಡಿಸಿದ್ದು, ಮಹಾತ್ಮಾ ಗಾಂಧಿಯವರ ವಂಶಸ್ಥ ತುಷಾರ್ ಗಾಂಧಿ ಕೂಡ ವಿರೋಧಿಸಿದ್ದಾರೆ. 
ಸದ್ಯದ ಕ್ಯಾಲೆಂಡರ್ ಗಳು ಮತ್ತು ಡೈರಿಗಳನ್ನೂ ಹಿಂಪಡೆದು, ಮಹಾತ್ಮ ಗಾಂಧಿ ಫೋಟೋ ಹೊತ್ತ ಹೊಸವನ್ನು ಮುದ್ರಿಸಬೇಕು ಎಂದು ಕೂಡ ಹಲವರು ಆಗ್ರಹಿಸಿದ್ದಾರೆ. 
SCROLL FOR NEXT