ಪ್ರಧಾನ ಸುದ್ದಿ

ನಮ್ಮ ಸರ್ಕಾರ ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಿದೆ: ಕೇಜ್ರಿವಾಲ್

Guruprasad Narayana
ನವದೆಹಲಿ: ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಎಎಪಿ ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಣ್ಣಿಸಿಕೊಂಡಿದ್ದಾರೆ. 
ಗಣರಾಜ್ಯೋತ್ಸವ ಅಂಗವಾಗಿ ಮಾಡಿದ ಭಾಷಣದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ, ತಮ್ಮ ಸರ್ಕಾರದ ಮೊದಲ ಬಜೆಟ್ ನಲ್ಲಿಯೇ ಶೈಕ್ಷಣಿಕ ಬಜೆಟ್ ಅನ್ನು ದ್ವಿಗುಣಗೊಳಿಸಿರುವುದಾಗಿ ಮತ್ತು ಆರೋಗ್ಯ ಬಜೆಟ್ ಅನ್ನು ೫೦% ಹೆಚ್ಚಿಸಿರುವುದಾಗಿ ಹೇಳಿದ್ದಾರೆ. 
ಕೇಂದ್ರ ಸರ್ಕಾರವನ್ನು ಒಳಗೊಂಡಂತೆ ದೇಶದ ಎಲ್ಲ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಆಸಕ್ತಿ ವಹಿಸಿದರೆ ದೇಶ ತ್ವರಿತಗತಿಯಲ್ಲಿ ಪ್ರಗತಿ ಕಾಣುತ್ತದೆ ಎಂದು ಕೂಡ ಕೇಜ್ರಿವಾಲ್ ಹೇಳಿದ್ದಾರೆ. 
"ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಿದರೆ ಅವರು ದೇಶಕ್ಕೆ ಹೆಮ್ಮೆ ತರುವುದರಲ್ಲಿ ಯಾವುದೇ ಸಂಶಯವಿಲ್ಲ" ಎಂದು ಕೂಡ ಕೇಜ್ರಿವಾಲ್ ಹೇಳಿದ್ದಾರೆ. 
ಫೆಬ್ರವರಿ ೨೦೧೫ ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ದೆಹಲಿಯಲ್ಲಿ ಆರೋಗ್ಯ ಸೌಕರ್ಯ ಕೆಟ್ಟ ಸ್ಥಿತಿಯಲ್ಲಿತ್ತು ಎಂದಿರುವ ಅವರು, ಸಣ್ಣ ಸಣ್ಣ ತೊಂದರೆಗೂ ಎಲ್ಲರು ಎಐಐಎಂಎಸ್ ಮತ್ತು ಸಫ್ದರ್ಜುಂಗ್ ಆಸ್ಪತ್ರೆಗಳಿಗೆ ಹೋಗಿಬಿಡುತ್ತಿದ್ದರು. 
"ಕಳೆದ ಎರಡು ವರ್ಷಗಳಲ್ಲಿ ನಾವು ಹಲವು ಪ್ರದೇಶಗಳಲ್ಲಿ ಮೊಹಲ್ಲಾ ಕ್ಲಿನಿಕ್ ಗಳನ್ನು ತೆರೆದಿದ್ದೇವೆ ಮತ್ತು ಉಚಿತವಾದ ಔಷದಗಳನ್ನು ನೀಡುತ್ತಿದ್ದೇವೆ. ನಾವು ಪ್ರಾಥಮಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿದ್ದೇವೆ" ಎಂದು ಕೇಜ್ರಿವಾಲ್ ಹೇಳಿದ್ದಾರೆ. 
"ಮುಂದಿನ ವರ್ಷಗಳಲ್ಲಿ ನಾವು ೧೦೦೦ ಮೊಹಲ್ಲಾ ಕ್ಲಿನಿಕ್ ಗಳನ್ನು ಹೊಂದಲಿದ್ದೇವೆ ಮತ್ತು ೨-೩ ಕಿಮಿ ತ್ರಿಜ್ಯದಲ್ಲಿ ಅವುಗಳು ಲಭ್ಯವಾಗಲಿವೆ" ಎಂದು ಕೂಡ ಮುಖ್ಯಮಂತ್ರಿ ಹೇಳಿದ್ದಾರೆ.
SCROLL FOR NEXT