ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ನವದೆಹಲಿ: ಕೇಂದ್ರ ಸಚಿವ ಅರುಣ್ ಜೇಟ್ಲಿ ಸಲ್ಲಿಸಿರುವ ಮಾನಹಾನಿ ಪ್ರಕರಣದಲ್ಲಿ ಮುಂದಿನ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇನ್ನಿತರ ಐದು ಎಎಪಿ ಮುಖಂಡರಿಗೆ ಕೋರ್ಟ್ ನೋಟಿಸ್ ನೀಡಿದೆ.
ಮಾನಹಾನಿ ಪ್ರಕರಣದಲ್ಲಿ ಆರು ಆರೋಪಿಗಳ ವಿರುದ್ಧ ನೋಟಿಸ್ ಸಿದ್ಧಪಡಿಸಬೇಕಿರುವುದರಿಂದ ಮುಂದಿನ ವಿಚಾರಣೆಗೆ ಮಾರ್ಚ್ ೨೫ ರಂದು ಕೋರ್ಟ್ ನಲ್ಲಿ ಹಾಜರಿರುವಂತೆ ಮುಖ್ಯ ಮೆಟ್ರೋಪಾಲಿಟನ್ ಮೆಜೆಸ್ಟ್ರೇಟ್ ಸುಮಿತ್ ದಾಸ್ ಹೇಳಿದ್ದಾರೆ.
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಹಗರಣದಲ್ಲಿ ಜೇಟ್ಲಿ ಕೈವಾಡವಿದೆ ಎಂದು ಹೇಳಿ ತಮ್ಮ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ದೂರಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಅರವಿಂದ್ ಕೇಜ್ರಿವಾಲ್, ಕುಮಾರ್ ವಿಶ್ವಾಸ್, ಅಶುತೋಷ್, ಸಂಜಯ್ ಸಿಂಗ್, ರಾಘವ್ ಚಡ್ಡಾ ಮತ್ತು ದೀಪಕ್ ಬಾಜಪೇಯಿ ವಿರುದ್ಧ ಮಾನಹಾನಿ ಪ್ರಕರಣವನ್ನು ಕೇಂದ್ರ ಸಚಿವರು ದಾಖಲಿಸಿದ್ದರು.
ಕೇಜ್ರಿವಾಲ್ ಜೊತೆಗೆ ಕೆಲಸ ಮಾಡುತ್ತಿದ್ದ ಅಧಿಕಾರಿ ವಿರುದ್ಧ ಸಿ ಬಿ ಐ ತನಿಖೆ ನಡೆಸುತ್ತಿದ್ದು, ಅದರ ಬಗ್ಗೆ ಸಾರ್ವಜನಿಕರ ಗಮನವನ್ನು ವಿಚಲಿತಗೊಳಿಸಲು ಎಎಪಿ ಮುಖಂಡರು ಈ ಸುಳ್ಳು ಆಪಾದನೆ ಮಾಡಿದ್ದರು ಎಂದು ಜೇಟ್ಲಿ ದೂರಿದ್ದರು.