ಲಾಲು ಪ್ರಸಾದ್ ಯಾದವ್ - ನಿತೀಶ್ ಕುಮಾರ್
ಪಾಟ್ನಾ: ಮುಂದಿನ ತಿಂಗಳು ರಾಷ್ಟ್ರೀಯ ಜನತಾ ದಳ ನಡೆಸಲಿರುವ 'ಬಿಜೆಪಿ ತೊಲಗಿಸಿ' ರ್ಯಾಲಿಯಲ್ಲಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದೆ. ಇದು ಬಿಹಾರದ ಆಡಳಿತ ಮೈತ್ರಿಪಕ್ಷಗಳಾದ ಆರ್ ಜೆ ಡಿ ಮತ್ತು ಜೆ ಡಿ ಯು ನಡುವೆ ಭುಗಿಲೆದ್ದಿದ್ದ ಭಿನ್ನಾಭಿಪ್ರಾಯಗಳಿಗೆ ತಾತ್ಕಾಲಿಕ ಶಮನ ನೀಡಿದೆ.
ಇನ್ನು ಹಲವು ಪಕ್ಷಗಳು ಕೂಡ ಭಾಗಿಯಾಗಲಿರುವ ಆಗಸ್ಟ್ ೨೭ರ 'ಬಿಜೆಪಿ ತೊಲಗಿಸಿ' ರ್ಯಾಲಿಗೆ ಹೋಗುವುದಾಗಿ ನಿತೀಶ್ ಕುಮಾರ್ ಈಗ ಹೇಳಿದ್ದಾರೆ. ರಾಷ್ಟ್ರಪತಿ ಅಭ್ಯರ್ಥಿ ಬೆಂಬಲದ ಕುರಿತಾಗಿ ಈ ಪಕ್ಷಗಳಲ್ಲಿ ಎದ್ದಿದ್ದ ಭಿನ್ನಾಭಿಪ್ರಾಯದಿಂದ ಜೆ ಡಿ ಯು ಈ ರ್ಯಾಲಿಯಿಂದ ಹಿಂದುಳಿಯಬಹುದು ಎಂದು ಶಂಕಿಸಲಾಗಿತ್ತು.
ಶನಿವಾರ ಜೆಡಿಯು ಪ್ರಧಾನ ಕಾರ್ಯದರ್ಶಿ ಶ್ಯಾಮ್ ರಜಾಕ್, ಆರ್ ಜೆ ಡಿ ರ್ಯಾಲಿಯಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದರು. ಇದೆ ಸಮಯದಲ್ಲಿ ಮತ್ತೊಂದು ಮೈತ್ರಿ ಪಕ್ಷ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದ ನಿತೀಶ್ ಕುಮಾರ್ "ಕಾಂಗ್ರೆಸ್ ಮಹಾತ್ಮಾ ಗಾಂಧಿ ಅವರ ಹಾದಿಯನ್ನು ತೊರೆದಿದೆ. ಅವರು ಜವಹಾರ್ ಲಾಲ್ ನೆಹರು ಅವರ ಸಿದ್ಧಾಂತಗಳಿಗೂ ತಿಲಾಂಜಲಿ ಇಟ್ಟಿದ್ದಾರೆ" ಎಂದಿದ್ದರು.
ಎನ್ ಡಿ ಎ ರಾಷ್ಟ್ರಪತಿ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರಿಗೆ ನಿತೀಶ್ ಕುಮಾರ್ ಬೆಂಬಲ ಘೋಷಿಸಿದಾಗಿಲಿಂದಲೂ ಮೈತ್ರಿ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳು ತೀವ್ರವಾಗಿತ್ತು.
ಆದರೆ ಬಿಜೆಪಿ ಪಕ್ಷವನ್ನು ನಿತೀಶ್ ಕುಮಾರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು ಮತ್ತೆ ಎನ್ ಡಿ ಎ ಭಾಗವಾಗುವುದಿಲ್ಲ ಎಂದಿದ್ದಾರೆ. ಕೇಸರಿ ಪಕ್ಷ ಸ್ವಾತಂತ್ರ್ಯ ಚಳುವಳಿಯ ಭಾಗವಾಗದೆ ಹೋದರು ದೇಶವನ್ನು ಆಳುತ್ತಿದೆ ಎಂದಿರುವ ಅವರು ಗೋರಕ್ಷಕರು ಹೆಚ್ಚುತ್ತಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ "ಬಿಜೆಪಿ ಗೋವುಗಳ ರಕ್ಷಣೆ ಬಗ್ಗೆ ಮಾತನಾಡುತ್ತದೆ. ಅವರೇಕೆ (ಬಿಜೆಪಿ ಮುಖಂಡರು) ರಸ್ತೆಯಲ್ಲಿ ಅಡ್ಡಾಡುವ ಹಸುಗಳಿಗೆ ತಮ್ಮ ಮನೆ ಬಿಟ್ಟುಕೊಡಬಾರದು" ಎಂದು ಛೇಡಿಸಿದ್ದಾರೆ.
ಮುಂದಿನ ಪ್ರಧಾನಿ ಆಕಾಂಕ್ಷಿಯಲ್ಲ ಎಂದು ಪುನರುಚ್ಚರಿಸಿರುವ ನಿತೀಶ್ "೧೫-೨೦ ಸಂಸದರೊಂದಿಗೆ ಪ್ರಧಾನಿಯಾಗುವ ಕನಸು ನನಗಿಲ್ಲ. ಆದರೆ ಎನ್ ಡಿ ಎ ಯೇತರ ಸರ್ಕಾರ ರಚಿಸಲು ಬೆಂಬಲ ನೀಡುತ್ತೇನೆ" ಎಂದಿದ್ದಾರೆ.