ಪ್ರಧಾನ ಸುದ್ದಿ

ಆಡಳಿತ ಎಐಡಿಎಂಕೆ ಬಣ ನಾಟಕವಾಡುತ್ತಿದೆ: ಪನ್ನೀರ್ಸೆಲ್ವಂ

Guruprasad Narayana
ಚೆನ್ನೈ: ಆಡಳಿತ ಎಐಡಿಎಂಕೆ ಬಣ ನಾಟಕವಾಡುತ್ತಿದೆ ಎಂದು ಆಪಾದಿಸಿರುವ ಮಾಜಿ ತಮಿಳುನಾಡು ಮುಖ್ಯಮಂತ್ರಿ ಒ ಪನ್ನೀರ್ಸೆಲ್ವಂ, ಮೈತ್ರಿ ಮಾತುಕತೆಯ ತಂಡದಲ್ಲಿದ್ದ ತಮ್ಮ ಬಣದ ಸದಸ್ಯರು ಮಾತುಕತೆಯಿಂದ ಹೊರಗೆ ಬರಲಿದ್ದಾರೆ ಎಂದಿದ್ದಾರೆ. 
"ಮಾತುಕತೆಗಾಗಿ ತಂಡವನ್ನು ರಚಿಸಿದ ಮೇಲೆ ಅವರು ನಾಟಕವಾಡಲು ಪ್ರಾರಂಭಿಸಿದರು. ನಾವು ಯಾವುದೇ ನಾಟಕ ಆಡಲು ಸಿದ್ಧರಿಲ್ಲ" ಎಂದು ಪನ್ನೀರ್ಸೆಲ್ವಂ ಮಾಧ್ಯಮಗಳಿಗೆ ತಿಳಿಸಿದ್ದಾರೆ. 
ಎಐಡಿಎಂಕೆ ಕಾರ್ಯಕರ್ತರು ತಮ್ಮ ಬಣದ ಪರವಾಗಿದ್ದು ಇದು ಶೀಘ್ರದಲ್ಲೇ ಸಾಬೀತಾಗಲಿದೆ ಎಂದು ಕೂಡ ಅವರು ಹೇಳಿದ್ದಾರೆ.
ಎಐಡಿಎಂಕೆಯ ಎರಡು ಬಣಗಳನ್ನು ವಿಲೀನಗೊಳಿಸುವ ಮಾತುಕತೆಗಾಗಿ ರಚಿಸಿದ್ದ ಏಳು ಜನರ ಸದಸ್ಯರ ತಂಡವನ್ನು ವಿಸರ್ಜಿಸುತ್ತಿರುವ ನಿರ್ಧಾರವನ್ನು ಪನ್ನೀರ್ಸೆಲ್ವಂ ಭಾನುವಾರ ರಾತ್ರಿ ಘೋಷಿಸಿದ್ದಾರೆ. 
ಡಿಸೆಂಬರ್ ನಲ್ಲಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸಾವಿನ ನಂತರ ಅವರ ನಿಕಟವರ್ತಿ ವಿ ಕೆ ಶಶಿಕಲಾ ಪಕ್ಷದ ಮೇಲೆ ನಿಯಂತ್ರಣ ಸಾಧಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ನಿರ್ಧಾರವನ್ನು ಪಕ್ಷ ತೆಗೆದುಕೊಂಡಿತ್ತು. ನಂತರ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಿಂದ ಶಶಿಕಲಾ ಜೈಲುವಾಸಕ್ಕೆ ಗುರಿಯಾಗಿದ್ದರು.
ಈ ಸಮಯದಲ್ಲಿ ಶಶಿಕಲಾ ವಿರುದ್ಧ ಸಿಡಿದೆದ್ದಿದ್ದ ಪನ್ನೀರ್ಸೆಲ್ವಂ ತಮ್ಮದೇ ಬಣವನ್ನು ಸ್ಥಾಪಿಸಿದ್ದರು. ನಂತರ ಎರಡು ಬಣಗಳ ವಿಲೀನಕ್ಕೆ ಶಶಿಕಲಾ ಹಾಗು ಅವರ ಪತಿ ಉಪ ಪ್ರಧಾನ ಕಾರ್ಯದರ್ಶಿ ಟಿ ಟಿ ವಿ ದಿನಕರನ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕೆಂಬ ಷರತ್ತು ವಿಧಿಸಿದ್ದರು. 
ದಿನಕರನ್ ಅವರನ್ನು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರವಿಡುತ್ತೇವೆ ಎಂದಷ್ಟೇ ತಿಳಿಸಿದ್ದ ಆಡಳಿತ ಎಐಡಿಎಂಕೆ, ಶಶಿಕಲಾ ಅಥವಾ ದಿನಕರನ್ ಅವರನ್ನು ಉಚ್ಚಾಟಿಸುವ ಬಗ್ಗೆ ಮಾತನಾಡಿರಲಿಲ್ಲ. ಇದು ಮಾತುಕತೆ ಮುರಿದುಬೀಳುವುದಕ್ಕೆ ಕಾರಣವಾಗಿದೆ ಎನ್ನಲಾಗಿದೆ. 
SCROLL FOR NEXT