ತಿರುವನಂತಪುರಂ: ಮಧ್ಯಪ್ರದೇಶ ಮೂಲದ ಆರ್ ಎಸ್ಎಸ್ ಮುಖಂಡರೊಬ್ಬರು ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
ಪಿಣರಾಯ್ ವಿಜಯನ್ ಅವರ ಭದ್ರತೆಗೆ ಈಗ ಹೆಚ್ಚುವರಿಯಾಗಿ ನಾಲ್ವರು ಶಸ್ತ್ರಸಜ್ಜಿತ ಕಮಾಂಡೊಗಳನ್ನು ನಿಯೋಜಿಸಲಾಗಿದ್ದು, ಇದರೊಂದಿಗೆ ಸಿಎಂ ಭದ್ರತಾ ಕಮಾಂಡೊಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಇಂದು ನಡೆದ ರಾಜ್ಯ ಭದ್ರತಾ ಪರಿಶೀಲನಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಆರ್ಎಸ್ಎಸ್ ಪ್ರಚಾರ ಪ್ರಮುಖ್ ಕುಂದನ್ ಚಂದ್ರಾವತ್ ಅವರು ತಮ್ಮ ಹೇಳಿಕೆ ಹಿಂಪಡೆದಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಸಮಿತಿ ತಿಳಿಸಿದೆ.
ಕುಂದನ್ ಚಂದ್ರಾವತ್ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ತೆಗೆದರೆ ಒಂದು ಕೋಟಿ ರುಪಾಯಿ ಬಹುಮಾನ ನೀಡುವುದಾಗಿ ಘೋಷಿಸಿ, ಬಳಿಕ ಆರ್ ಎಸ್ ಎಸ್ ಒತ್ತಡಕ್ಕೆ ಮಣಿದು ತಮ್ಮ ಹೇಳಿಕೆ ಹಿಂಪಡೆದಿದ್ದರು. ಅಲ್ಲದೆ ಈ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದರು.