ನ್ಯಾಯಕ್ಕಾಗಿ ಮೃತ ಕೇರಳ ಯೋಧನ ಪತ್ನಿ ಆಗ್ರಹ
ಮಹಾರಾಷ್ಟ್ರದ ಕಂಟೋನ್ಮೆಂಟ್ ನಿಂದ ಕಾಣೆಯಾಗಿದ್ದಾರೆ ಎಂದು ವರದಿಯಾದ ನಂತರ ತೊರೆದು ಹೋಗಿದ್ದ ಸೇನಾಶಿಬಿರದಲ್ಲಿ ಶವದೇಹ ಪತ್ತೆಯಾದ ೩೩ ವರ್ಷದ ಕೇರಳ ಯೋಧನ ಪತ್ನಿ
ತಿರುವನಂತಪುರಂ: ಮಹಾರಾಷ್ಟ್ರದ ಕಂಟೋನ್ಮೆಂಟ್ ನಿಂದ ಕಾಣೆಯಾಗಿದ್ದಾರೆ ಎಂದು ವರದಿಯಾದ ನಂತರ ತೊರೆದು ಹೋಗಿದ್ದ ಸೇನಾಶಿಬಿರದಲ್ಲಿ ಶವದೇಹ ಪತ್ತೆಯಾದ ೩೩ ವರ್ಷದ ಕೇರಳ ಯೋಧನ ಪತ್ನಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಫೆಬ್ರವರಿ ೨೫ರಿಂದ ಯೋಧ ಲ್ಯಾನ್ಸ್ ನಾಯಕ್ ರಾಯ್ ಮ್ಯಾಥ್ಯು (೩೩) ಅವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು. ನಾಸಿಕ್ ನ ಡಿಯೋಲಾಲಿ ಕಂಟೋನ್ಮೆಂಟ್ ನ ಬಳಿಯಿರುವ ಖಾಲಿ ಸೇನಾ ಶಿಬಿರದಲ್ಲಿ ನೇಣು ಹಾಕಿಕೊಂಡಿದ್ದ ಕೊಳೆತು ಹೋದ ಶವ ನಂತರ ಪತ್ತೆಯಾಗಿತ್ತು.
"ನನಗೆ ನ್ಯಾಯ ಬೇಕು ಮತ್ತು ನನ್ನ ಪತಿಗೆ ಏನಾಯಿತು ಎಂದು ತಿಳಿಯಬೇಕಿದೆ" ಎಂದು ಮ್ಯಾಥ್ಯು ಪತ್ನಿ ಫಿನಿ, ಶನಿವಾರ ತಿರುವನಂತಪುರ ವಿಮಾನನಿಲ್ದಾಣಕ್ಕೆ ಮೃತ ದೇಹ ಆಗಮಿಸಿದಾಗ ಹೇಳಿದ್ದಾರೆ.
"ದೇಶಕ್ಕೆ ೧೪ ವರ್ಷ ಸೇವೆ ನೀಡಿದ ಜವಾನ ಅವರು. ಇಡೀ ಘಟನೆ ನಿಗೂಢವಾಗಿದೆ ಮತ್ತು ಅವರಿಗೆ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ. ದೇಹ ಬಂದ ನಂತರ, ಅದನ್ನು ತಿರಂಗ ಬಾವುಟದಲ್ಲಿ ಸುತ್ತುವುದು ನಿಯಮ ಅದನ್ನು ಕೂಡ ಮಾಡಲಾಗಿಲ್ಲ" ಎಂದು ಸಂಬಂಧಿಯೊಬ್ಬರು ಹೇಳಿದ್ದಾರೆ.
ಮರು ಶವಪರೀಕ್ಷೆ ನಡೆಸಲು ಈ ಸಂಬಂಧಿ ಜಿಲ್ಲಾ ಕಲೆಕ್ಟರ್ ಬಳಿ ಮನವಿ ಮಾಡಿದ್ದಾರೆ. "ಇಂದು (ಶನಿವಾರ) ಬೆಳಗ್ಗೆಯಷ್ಟೇ ಇದಕ್ಕಾಗಿ ಮನವಿ ಬಂದಿದೆ ಮತ್ತು ಅದಕ್ಕೆ ಅವಕಾಶ ಮಾಡಿಕೊಡಲಾಗುವುದು. ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಮರು ಮರಣೋತ್ತರ ಪರೀಕ್ಷೆ ನಡೆಸಿ ನಂತರ ದೇಹವನ್ನು ಕುಟುಂಬದ ವಶಕ್ಕೆ ನೀಡಲಾಗುವದು" ಎಂದು ಕೊಲ್ಲಮ್ ನ ಉಪ ಕಲೆಕ್ಟರ್ ಕೆ ಚಿತ್ರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ 'ಸಹಾಯಕ್ ಸಿಸ್ಟಮ್' ವಿಡಿಯೋದ ಭಾಗವಾಗಿದ್ದರು ಮ್ಯಾಥ್ಯು. ಈ ವಿಡಿಯೋದಲ್ಲಿ 'ಸಹಾಯಕ್' ರನ್ನು ಹಿರಿಯ ಅಧಿಕಾರಿಗಳು ಕೆಟ್ಟ ರೀತಿಯಲ್ಲಿ ನಡೆಸಿಕೊಂಡು, ಶೂ ಪಾಲಿಶ್, ಬಟ್ಟೆ ಒಗೆಯುವ ಮತ್ತು ಸಾಕು ಪ್ರಾಣಿಗಳನ್ನು ಓಡಾಟಕ್ಕೆ ಕರೆದುಕೊಂಡು ಹೋಗುವ ಕೆಲಸಗಳನ್ನು ನೀಡುತ್ತಾರೆ ಎಂದು ದೂರಿದ್ದರು.
ಮುಖವಾಡ ಧರಿಸಿ ಅಡಗಿಸಿದ್ದ ಕ್ಯಾಮರಾದಿಂದ ಚಿತ್ರೀಕರಿಸಲಾಗಿದ್ದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಮತ್ತು ಈ 'ಸಹಾಯಕ್ ಯೋಜನೆ' ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.