ನವದೆಹಲಿ: ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಅತ್ಯಂತ ಪ್ರತಿಷ್ಠೆಯ ಕಣವಾಗಿದ್ದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಗುರುವಾರ ಬಹಿರಂಗವಾಗಿದ್ದು, ದೇಶದ ಅತಿ ದೊಡ್ಡ ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಆದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ ಎಂದು ಹಲವು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.
ಸಿ ವೋಟರ್ ಸಮೀಕ್ಷೆ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನ ಲಭ್ಯವಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಬಿಜೆಪಿಗೆ 180, ಎಸ್ಪಿ, ಕಾಂಗ್ರೆಸ್ ಮೈತ್ರಿಗೆ 120 ಸ್ಥಾನ ಪಡೆದರೆ, ಬಿಎಸ್ಪಿಗೆ 90 ಹಾಗೂ ಇತರರು 09 ಸ್ಥಾನ ಪಡೆಯುವುದಾಗಿ ಹೇಳಿದೆ.
ಇನ್ನು ನ್ಯೂಸ್ 18, ಎಂಆರ್ ಸಿ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 185 ಸ್ಥಾನ ಸಮಾಜವಾದಿ, ಕಾಂಗ್ರೆಸ್ ಮೈತ್ರಿಕೂಟಕ್ಕೆ 120, ಬಿಎಸ್ಪಿ 90, ಇತರೆ 08 ಸ್ಥಾನ ಪಡೆಯಲಿದ್ದಾರೆ. ಆದರೆ ಟೈಮ್ಸ್ ನೌ ವಿಎಂಆರ್ ಸಮೀಕ್ಷೆ ಬಿಜೆಪಿ 190-210 ಎಸ್ಪಿ-ಕಾಂಗ್ರೆಸ್ 110-130 ಬಿಎಸ್ಪಿ 57-74 ಸ್ಥಾನ ಪಡೆದರೆ ಇತರರು 8 ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಹೇಳಿದೆ.
403 ಸದಸ್ಯ ಬಲ ಹೊಂದಿರುವ ಉತ್ತರ ಪ್ರದೇಶದಲ್ಲಿ ಸ್ಪಷ್ಟ ಬಹುಮತ ಪಡೆಯಲು 202 ಸ್ಥಾನಗಳ ಅಗತ್ಯವಿದ್ದು, ಅಂತಿಮವಾಗಿ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಗಳಿಸಲಿವೆ ಎಂಬುದು ಮಾರ್ಚ್ 11ರ ಮತಎಣಿಕೆಯ ನಂತರವಷ್ಟೇ ತಿಳಿದುಬರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics