ನವದೆಹಲಿ: ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ನವ ಭಾರತ ನಿರ್ಮಾಣಕ್ಕೆ ಬುನಾದಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.
ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇಂದು ಸಂಜೆ ದೆಹಲಿಯ ಅಶೋಕ ರಸ್ತೆಯಲ್ಲಿ ಬಿಜೆಪಿ ಪ್ರಧಾನ ಕಚೇರಿವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಜಯೋತ್ಸವ ಯಾತ್ರೆ ನಡೆಸಿದರು. ಬಳಿಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇವತ್ತು ನಾನು ನವ ಭಾರತವನ್ನು ನೋಡುತ್ತಿದ್ದೇನೆ. 125 ಕೋಟಿ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗಿ ನವ ಭಾರತದ ಕನಸು ನನಸು ಮಾಡುತ್ತೇವೆ ಎಂದರು.
ಕಳೆದ 50 ವರ್ಷಗಳಿಂದ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಭಾವನಾತ್ಮಕ ವಿಚಾರಗಳನ್ನೇ ಪ್ರಮುಖವಾಗಿ ಬಳಸಿಕೊಳ್ಳುತ್ತಿವೆ. ಆದರೆ ಈ ಬಾರಿ ಯಾವ ಭಾವನಾತ್ಮಕ ಅಲೆ ಇಲ್ಲದೆಯೇ ಕೇವಲ ಅಭಿವೃದಿಗಾಗಿ ಅಭೂತಪೂರ್ವ ಜಯ ಸಿಕ್ಕಿದೆ. ದೇಶದ ಅಭಿವೃದ್ಧಿ ಬೆಂಬಲಿಸಿ ಬಡವರು ಮತ ಹಾಕಿದ್ದಾರೆ ಎಂದರು.
ಜನರು ಕೇವಲ ಮತ ಹಾಕುವುದಕ್ಕೆ ಸೀಮಿತವಾಗುವುದು ಬೇಡ. ಅವರು ಸಹ ದೇಶದ ಅಭಿವೃದ್ಧಿ ಕಾರ್ಯದಲ್ಲಿ ಭಾಗಿಯಾಗಬೇಕು. ಬಡವರ ಶಕ್ತಿಯ ಬಗ್ಗೆ ನಮಗೆ ಅರಿವಿದೆ. ಅವರನ್ನು ಹೆಚ್ಚು ಸಬಲರನ್ನಾಗಿ ಮಾಡಲು ನಾವು ಶ್ರಮಿಸುತ್ತೇವೆ ಎಂದರು.
ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಬೆಂಬಲ ಹೆಚ್ಚುತ್ತಾ ಬಂದಿದೆ. ಈ ಯಶಸ್ಸಿನ ಹಿಂದೆ ಕಾರ್ಯಕರ್ತರ ಪಾಲು ಇದೆ. ಈ ಚುನಾವಣೆಯ ಗೆಲುವಿಗೆ ಕಾರಣರಾದ ಎಲ್ಲಾ ನಾಯಕರಿಗೂ ಹಾಗೂ ಜನರಿಗೆ ಧನ್ಯವಾದ ಎಂದರು.