ಆಸಿಫ್ ಅಲಿ ನಿಜಾಮಿ - ನಜಿಮ್ ನಿಜಾ
ಲಾಹೋರ್: ಕಳೆದ ಗುರುವಾರದಿಂದ ನಾಪತ್ತೆಯಾಗಿರುವ ಭಾರತದ ಇಬ್ಬರು ಮುಸ್ಲಿಂ ಧರ್ಮ ಗುರುಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ವಶದಲ್ಲಿರುವುದಾಗಿ ಶನಿವಾರ ಅಧಿಕೃತ ಮೂಲಗಳು ತಿಳಿಸಿವೆ.
ತಮ್ಮ ಸಂಬಂಧಿಗಳನ್ನು ಭೇಟಿ ಮಾಡಲು ಕರಾಚಿಗೆ ತೆರಳಿದ್ದ ಹಜರತ್ ನಿಜಾಮುದ್ದೀನ್ ದರ್ಗಾದ ಧರ್ಮಗುರು ಸಯ್ಯದ್ ಆಸಿಫ್ ಅಲಿ ನಿಜಾಮಿ ಮತ್ತು ಸೂಫಿ ಧರ್ಮಗುರು ನಜಿಮ್ ನಿಜಾಮಿ ಅವರನ್ನು ಮುತ್ತಾಹಿದಾ ಕ್ವಾಮಿ ಮೂವ್ಮೆಂಟ್ (ಎಂಕ್ಯುಎಂ)ನೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಪಾಕ್ ಗುಪ್ತಚರ ಸಂಸ್ಥೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಕರಾಚಿ ಮೂಲದ ಶಹೀನ್ ಏರ್ ಲೈನ್ಸ್ ಮೂಲಕ ಲಾಹೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಬ್ಬರು ಭಾರತೀಯ ಮೌಲ್ವಿಗಳನ್ನು ಗುಪ್ತಚರ ಸಂಸ್ಥೆಯ ಸಿಬ್ಬಂದಿ ವಶಕ್ಕೆ ಪಡೆದು, ರಹಸ್ಯ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಹೆಸರು ಹೇಳಲಿಚ್ಚಿಸಿದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಮೌಲ್ವಿಗಳ ನಾಪತ್ತೆ ಪ್ರಕರಣವನ್ನು ಭಾರತ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣ ಸಂಬಂಧ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಇಬ್ಬರು ಭಾರತೀಯರ ಕುರಿತ ಮಾಹಿತಿ ಹಾಗೂ ವರದಿಗಳನ್ನು ನವದೆಹಲಿಗೆ ನೀಡುವಂತೆ ಪಾಕಿಸ್ತಾನಕ್ಕೆ ಮನವಿ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.