ನವದೆಹಲಿ: ಸತತ 27 ಚುನಾವಣೆಗಳಲ್ಲಿ ಸೋಲು ಕಂಡಿರುವ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಅವರ ಹೆಸರನ್ನು ಗಿನ್ನೆಸ್ ವಿಶ್ವದಾಖಲೆಗೆ ಸೇರಿಸಬೇಕು ಎಂದು ವಿದ್ಯಾರ್ಥಿಯೋರ್ವ ಮನವಿ ಮಾಡಿದ್ದಾನೆ ಎಂಬುದಾಗಿ ದಿ ಫೈನಾನ್ಶಿಯಲ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮಧ್ಯ ಪ್ರದೇಶದ ಹೊಶಂಗಾಬಾದ್ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ದಿವಾನ್ ಎಂಬುವವರು ಗಿನ್ನೆಸ್ ಸಂಸ್ಥೆಗೆ ಇಂತಹುದೊಂದು ಅರ್ಜಿ ರವಾನಿಸಿದ್ದಾರೆ. ಅಚ್ಚರಿ ಎಂದರೆ ವಿಶಾಲ್ ದಿವಾನ್ ಅವರ ಅರ್ಜಿಯನ್ನು ಗಿನ್ನೆಸ್ ಸಂಸ್ಥೆ ಕೂಡ ಸ್ವೀಕರಿಸಿದ್ದು, ವಿದ್ಯಾರ್ಥಿಗೆ ಅರ್ಜಿ ಸ್ವೀಕರಣೆಯ ದೃಢೀಕರಣ ಕೂಡ ನೀಡಿದೆ. ಆದರೆ ವಿದ್ಯಾರ್ಥಿಯ ಅರ್ಜಿಯನ್ನು ಅಮೆರಿಕ ಮೂಲದ ಗಿನ್ನೆಸ್ ಸಂಸ್ಥೆ ಸ್ವೀಕರಿಸಿದೆಯಾದರೂ ಅರ್ಜಿಗೆ ಅನುಮೋದನೆ ನೀಡಿಲ್ಲ. ಚುನಾವಣೆ ಸೋಲಿನ ಕುರಿತ ಕಾರಣಕ್ಕೆ ದಾಖಲೆ ಪುಟ ತೆರೆಯಬಹುದೇ ಎಂಬುದನ್ನು ಗಿನ್ನೆಸ್ ಸಂಸ್ಥೆ ಇನ್ನಷ್ಟೇ ನಿರ್ಧರಿಸಬೇಕಿದೆ.
ಅರ್ಜಿಯಲ್ಲಿ ವಿದ್ಯಾರ್ಥಿ ವಿಶಾಲ್ ದಿವಾನ್, ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯ ಪ್ರವೃತ್ತರಾದ ಬಳಿಕ ಅಂದರೆ ಕಳೆದ ಐದು ವರ್ಷಗಳಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಪ್ರದರ್ಶನ ತೋರಿದ್ದು, ಸುಮಾರು 27 ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿದೆ. ಈ ಅಂಕಿ ಅಂಶಗಳು ರಾಹುಲ್ ಗಾಂಧಿ ಅವರ ಹೆಸರನ್ನು ಗಿನ್ನೆಸ್ ಪುಸ್ತಕದಲ್ಲಿ ಸೇರಿಸಲು ಸಹಕಾರಿಯಾಗುತ್ತದೆ ಎಂದು ಹೇಳಿ ಗಿನ್ನೆಸ್ ಸಂಸ್ಥೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ರಾಜಕೀಯ ಜೀವನದಲ್ಲಿ ಪ್ರಸ್ತುತ ಸಂಕಷ್ಟದ ಸಮಯ ಎದುರಿಸುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷದ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದಾರೆ. ಇತ್ತೀಚೆಗದೆ ಮುಕ್ತಾಯವಾದ ಪಂಚರಾಜ್ಯಗಳ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಸಾಧನೆ ಅಷ್ಟಕಷ್ಟೇ. ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸಂಪೂರ್ಣ ಬಿಜೆಪಿ ಪಾಲಾದರೆ, ಗೋವಾ ಮತ್ತು ಮಣಿಪುರದಲ್ಲಿ ಸರ್ಕಾರ ರಚಿಸುವ ಅವಕಾಶವಿದ್ದರೂ, ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೇ ಕಾಂಗ್ರೆಸ್ ಅವಕಾಶ ಕೈ ಚೆಲ್ಲಿತ್ತು.
ಪಂಜಾಬ್ ನಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಅಧಿಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದೇ ಬಿಂಬಿತವಾಗಿರುವ ರಾಯ್ ಬರೇಲಿ ಮತ್ತು ಅಮೇತಿಯ ವಿಧಾನಸಭಾ ಸ್ಥಾನವನ್ನು ಬಿಜೆಪಿ ಕಸಿದಿತ್ತು. ರಾಹುಲ್ ಗಾಂಧಿ ಮತ್ತು ಸೋನಿಯಾಗಾಂಧಿ ಅವರು ಈ ಕ್ಷೇತ್ರಗಳ ಸಂಸದರಾಗಿದ್ದು, ಇಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ವಿಫಲರಾಗಿದ್ದರು.