ಪ್ರಧಾನ ಸುದ್ದಿ

'ಜನರ ಮೇಲೆ 'ಆಧಾರ್' ಹೇರಲಾಗುತ್ತಿದೆ'; ಲೋಕಸಭೆಯಿಂದ ಹೊರನಡೆದ ವಿರೋಧ ಪಕ್ಷಗಳು

Guruprasad Narayana
ನವದೆಹಲಿ: ಭಾರತೀಯರಿಗೆ ಆಧಾರ್ ಗುರುತಿನ ಚೀಟಿಗಳನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದೆ ಎಂದು ದೂರಿರುವ ವಿಪಕ್ಷಗಳು, ಹಣಕಾಸು ಮಸೂದೆಯ ಅಂಗೀಕಾರಕ್ಕೆ ಮುಂಚಿತವಾಗಿಯೇ ಲೋಕಸಭೆಯಿಂದ ಹೊರನಡೆದಿವೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಬಿಜು ಜನತಾದಳ ಸದಸ್ಯರು ಇದನ್ನು ತೀವ್ರವಾಗಿ ವಿರೋಧಿಸಿದ್ದಾರೆ. 
ಆದಾಯ ತೆರಿಗೆ ರಿಟರ್ನ್ಸ್ ದಾಖಲಿಸಲು ಆಧಾರ್ ಗುರುತಿನ ಚೀಟಿಯನ್ನು ಕಡ್ಡಾಯ ಮಾಡಿರುವ ತಿದ್ದುಪಡಿಗೆ ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಹಣಕಾಸು ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. 
ಹಣಕಾಸು ಮಸೂದೆಯ ಚರ್ಚೆಗಳಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯೆ ನೀಡಿದ ಕೂಡಲೇ, ಆದಾಯ ತೆರಿಗೆ ರಿಟರ್ನ್ಸ್ ದಾಖಲಿಸಲು ಆಧಾರ್ ಗುರುತಿನ ಚೀಟಿಯನ್ನು ಕಡ್ಡಾಯ ಮಾಡುವ ಮೂಲಕ ಸರ್ಕಾರ ಭಾರತೀಯ ನಾಗರಿಕರ ಮೇಲೆ ಆಧಾರ್ ಹೇರುತ್ತಿದೆ ಎಂದು ಬಿಜು ಜನತಾ ದಳ ಮುಖಂಡ ಭರ್ತೃಹರಿ ಮಹ್ತಾಬ್ ವಾಗ್ದಾಳಿ ನಡೆಸಿದರು. 
"ನೀವು ನಾಗರಿಕರ ಮೇಲೆ ಹೇರುತ್ತಿದ್ದೀರ" ಎಂದು ಮಹ್ತಾಬ್ ಹೇಳಿದಕ್ಕೆ ಜೇಟ್ಲಿ "ಹೌದು ಹೇರುತ್ತಿದ್ದೇವೆ" ಎಂದು ಉತ್ತರಿಸಿದ್ದಾರೆ. 
ಈ ನಡೆಯನ್ನು ಸಮರ್ಥಿಸಿಕೊಂಡಿರುವ ಸಚಿವ, ಜನ ಒಂದಕ್ಕಿಂತಲೂ ಹೆಚ್ಚಿನ ಪ್ಯಾನ್ ಕಾರ್ಡ್ ಗಳನ್ನು ಬಳಸಿ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂದಿದ್ದಾರೆ. 
ನಕಲಿ ಆಧಾರ್ ಗುರುತಿನ ಚೀಟಿಯನ್ನು ಸೃಷ್ಟಿಸಲು ಸಾಧ್ಯವಿಲ್ಲವೇಕೆ ಎಂದು ಸಿಪಿಐ (ಮಾರ್ಕ್ಸಿಸ್ಟ್) ಪಕ್ಷದ ಮುಖಂಡ ಮೊಹಮದ್ ಸಲೀಮ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. "ನಕಲಿ ಪ್ಯಾನ್ ಕಾರ್ಡ್ ಸೃಷ್ಟಿಸಬಹುದಾದರೆ, ನಕಲಿ ಆಧಾರ್ ಗುರುತಿನ ಚೀಟಿಯನ್ನು ಸೃಷ್ಟಿಸಲು ಸಾಧ್ಯವಿಲ್ಲವೇಕೆ" ಎಂದು ಸಲೀಮ್ ಪ್ರಶ್ನಿಸಿದ್ದಾರೆ. 
ವಿತ್ತ ಸಚಿವರ ಪ್ರತಿಕ್ರಿಯೆ ಸಮಾಧಾನ ತಂದಿಲ್ಲ ಎಂದು ಮಹ್ತಾಬ್ ಹೇಳಿದ ತಕ್ಷಣ ಬಿಜೆಡಿ ಪಕ್ಷದ ಸದಸ್ಯರು ಲೋಕಸಭೆಯಿಂದ ಹೊರನಡೆದಿದ್ದಾರೆ. 
ತದನಂತರ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜು ಖರ್ಗೆ ಮಾತನಾಡಿ, ಸರ್ಕಾರ ದೇಶದಾದ್ಯಂತ ರೈತರ ಸಾಲ ಮನ್ನಾ ಮಾಡಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. 
"ಪ್ರಧಾನಿ, ವಿತ್ತ ಸಚಿವ ಮತ್ತು ಕೃಷಿ ಸಚಿವ ಎಲ್ಲರು ಇಲ್ಲಿ ಕುಳಿತಿದ್ದಾರೆ. ನೀವು ಉತ್ತರಪ್ರದೇಶದಲ್ಲಿ ಭರವಸೆ ನೀಡಿದಂತೆ ದೇಶದಾದ್ಯಂತ ರೈತರ ಸಾಲ ಮನ್ನಾ ಮಾಡಿ" ಎಂದು ಖರ್ಗೆ ಆಗ್ರಹಸಿದ್ದಾರೆ. 
"ನೀವೇ ಹೇಳಿರುವಂತೆ --- ಜೇಟ್ಲಿ ಸಾಹೇಬರು ಬೊಕ್ಕಸದಲ್ಲಿ ಸಾಕಷ್ಟು ಹಣ ಹೊಂದಿದ್ದಾರೆ. ೨ ಲಕ್ಷ ಕೋಟಿಗಿಂತಲೂ ಹೆಚ್ಚು ಹಣವಿದೆ. ನೀವು ಘೋಷಣೆ ಮಾಡಬಾರದೇಕೆ" ಎಂದು ಅವರು ಪ್ರಶ್ನಿಸಿದ್ದಾರೆ.
ಆಗ ಸಭಾಪತಿ ಸುಮಿತ್ರಾ ಮಹಾಜನ್ ಮಸೂದೆಯನ್ನು ಅಂಗೀಕರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಕ್ಕೆ ಕುಪಿತಗೊಂಡ ವಿಪಕ್ಷ ಸದಸ್ಯರು ಹೊರನಡೆದಿದ್ದಾರೆ. ಹಣಕಾಸು ಮಸೂದೆ ಅಂಗೀಕಾರಗೊಂಡಾಗ ಬಹುತೇಕ ವಿಪಕ್ಷ ಆಸನಗಳು ಖಾಲಿಯಾಗಿದ್ದವು. 
SCROLL FOR NEXT