ನವದೆಹಲಿ: ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಅವರನ್ನು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ "ನಿಷೇಧಿತ ಪ್ರಯಾಣಿಕ" ಪಟ್ಟಿಗೆ ಸೇರಿಸಿದೆ ಎಂದು ತಿಳಿದುಬಂದಿದೆ.
ನಿನ್ನೆ ಬಿಸಿನೆಸ್ ಕ್ಲಾಸ್ ಸೀಟಿಗಾಗಿ ಪಟ್ಟು ಹಿಡಿದು ಸಿಬ್ಬಂದಿಯೊಂದಿಗೆ ಕಾದಾಟ ನಡೆಸಿದ್ದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ವಿರುದ್ಧ ಏರ್ ಇಂಡಿಯಾ ಸಂಸ್ಥೆ ಕಠಿಣ ಕ್ರಮ ಕೈಗೊಂಡಿದ್ದು, ಇನ್ನೆಂದೂ ಏರ್ ಇಂಡಿಯಾ ವಿಮಾನದಲ್ಲಿ ಸಂಸದ ರವೀಂದ್ರ ಗಾಯಕ್ವಾಡ್ ಪ್ರಯಾಣ ಮಾಡದಂತೆ ಅವರ ಹೆಸರನ್ನು "ನಿಷೇಧಿತ ಪ್ರಯಾಣಿಕ" ಪಟ್ಟಿಗೆ ಸೇರಿಸಿದೆ. ಸಂಸದ ರವೀಂದ್ರ ಗಾಯಕ್ವಾಡ್ ಅವರು ತಮ್ಮ ಸಂಸ್ಥೆಯ ಹಾಗೂ ಸಿಬ್ಬಂದಿಯ ಕ್ಷಮೆ ಕೇಳದ ಹೊರತು ತಾವು ಆ ಪಟ್ಟಿಯಿಂದ ಅವರ ಹೆಸರನ್ನು ತೆಗೆಯುವುದಿಲ್ಲ ಮತ್ತು ಏರ್ ಇಂಡಿಯಾ ವಿಮಾನದಲ್ಲಿ ಅವರ ಪ್ರಯಾಣಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ಸಂಸ್ಥೆ ಖಡಕ್ ಎಚ್ಚರಿಕೆ ನೀಡಿದೆ.
ರವೀಂದ್ರ ಗಾಯಕ್ವಾಡ್ ಅವರನ್ನು ಫೆಡರೇಷನ್ ಆಫ್ ಏರ್ ಇಂಡಿಯಾ ಏರ್ ಲೈನ್ಸ್ ಸಂಸ್ಥೆಯ ಗವರ್ನಿಂಗ್ ಬಾಡಿ ಕಪ್ಪು ಪಟ್ಟಿಗೆ ಸೇರಿಸಿದ್ದು, ಅಸಭ್ಯ ವರ್ತನೆ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಈಗಾಗಲೇ ಈ ಪಟ್ಟಿಯನ್ನು ಏರ್ ಇಂಡಿಯಾ ಅಧ್ಯಕ್ಷ ಅಶ್ವಾನಿ ಲೊಹಾನಿ ಅವರಿಗೆ ಕಳುಹಿಸಲಾಗಿದ್ದು, ಅವರ ಅನುಮೋದನೆ ದೊರೆತ ಬಳಿಕ ಸಂಸ್ಥೆಯ ವೆಬ್ ತಾಣದಲ್ಲಿ ಪ್ರಕಟಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಮೊದಲು ಸಿಬ್ಬಂದಿ ಕ್ಷಮೆ ಕೇಳಲಿ ಬಳಿಕ ಮುಂದಿನದ್ದು ಆಲೋಚಿಸುವೆ
ಇನ್ನು ಏರ್ ಇಂಡಿಯಾ ಸಂಸ್ಥೆ ತಮ್ಮನ್ನು ಕಪ್ಪು ಪಟ್ಟಿಗೆ ಸೇರಿಸಿದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ರವೀಂದ್ರ ಗಾಯಕ್ವಾಡ್ ಅವರು, ಮೊದಲು ಸಿಬ್ಬಂದಿ ಕ್ಷಮೆ ಕೇಳಲಿ. ಬಳಿಕ ಮುಂದಿನದ್ದು ಆಲೋಚಿಸುತ್ತೇನೆ. ಒಂದು ವೇಳೆ ಭವಿಷ್ಯದಲ್ಲೂ ಇದೇ ರೀತಿ ಸಂಸ್ಥೆಯ ಸಿಬ್ಬಂದಿ ವರ್ತಿಸಿದರೆ ಇಂತಹುದೇ ಪ್ರಸಂಗ ಮರುಕಳಿಸುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.