ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ವಿರುದ್ಧ ಸೆಡ್ಡು ಹೊಡೆದಿರುವ ವಿಮಾನಯಾನ ಸಂಸ್ಥೆಗಳು, ಆತ ಇನ್ನು ಮುಂದೆ ಯಾವುದೇ ವಿಮಾನದಲ್ಲೂ ಪ್ರಯಾಣ ಮಾಡದಂತೆ ನಿಷೇಧ ಹೇರಿ ಆದೇಶ ಜಾರಿಗೆ ತಂದಿವೆ.
ದೇಶದ ವಿಮಾನಯಾನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಂಸದರೊಬ್ಬರನ್ನು ವಿಮಾನ ಪ್ರಯಾಣ ಮಾಡದಂತೆ ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿದ್ದು, ನಿನ್ನೆ ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿ ವಿವಾದಕ್ಕೀಡಾಗಿದ್ದ ಮಹಾರಾಷ್ಟ್ರದ ಒಸ್ಮಾನಾಬಾದ್ ನ ಶಿವಸೇನೆ ಪಕ್ಷದ ಸಂಸದ ರವೀಂದ್ರ ಗಾಯಕ್ವಾಡ್ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಆ ಮೂಲಕ ಸಂಸದ ರವೀಂದ್ರ ಗಾಯಕ್ವಾಡ್ ಇನ್ನು ಮುಂದೆ ದೇಶದಲ್ಲಿ ಯಾವುದೇ ದೇಶೀಯ ವಿಮಾನಗಳಲ್ಲಿ ಪ್ರಯಾಣಿಸದಂತೆ ನಿಷೇಧ ಹೇರಲಾಗಿದೆ.
ಈ ಬಗ್ಗೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಮತ್ತು ಫೆಡರೇಷನ್ ಅಫ್ ಇಂಡಿಯನ್ ಏರ್ ಲೈನ್ಸ್ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಸಂಸದ ರವೀಂದ್ರ ಗಾಯಕ್ವಾಡ್ ಇನ್ನು ಮುಂದೆ ನಮ್ಮ ಫೆಡರಷನ್ ನ ಸದಸ್ಯ ಸಂಸ್ಥೆಗಳ ಯಾವುದೇ ವಿಮಾನದಲ್ಲೂ ಪ್ರಯಾಣ ಮಾಡದಂತೆ ನಿಷೇಧ ಹೇರಲಾಗಿದೆ. ಈ ನಿಷೇಧ ಈಗಿನಿಂದಲೇ ಜಾರಿಗೆ ಬರುವಂತೆ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ಹೇಳಿದೆ.
ಸಂಸದ ರವೀಂದ್ರ ಗಾಯಕ್ವಾಡ್ ರಿಟರ್ನ್ ಟಿಕೆಟ್ ರದ್ದುಗೊಳಿಸಿದ ಏರ್ ಇಂಡಿಯಾ
ಸಂಸದ ರವೀಂದ್ರ ಗಾಯಕ್ವಾಡ್ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಫ್ ಐಎ (ಫೆಡರೇಷನ್ ಅಫ್ ಇಂಡಿಯನ್ ಏರ್ ಲೈನ್ಸ್) ಆದೇಶ ಹೊರಡಿಸಿದ ಬೆನ್ನಲ್ಲೇ, ಸಂಸದರ ರಿಟರ್ನ್ ಟಿಕೆಟ್ ಅನ್ನು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ರದ್ದುಗೊಳಿಸಿದೆ.
ಧೈರ್ಯವಿದ್ದರೆ ನನ್ನನ್ನು ತಡೆಯಲಿ ಎಂದ ಸಂಸದ
ಅತ್ತ ವಿಮಾನಯಾನ ಸಂಸ್ಥೆಗಳು ಸಂಸದ ರವೀಂದ್ರ ಗಾಯಕ್ವಾಡ್ ಅವರ ವಿಮಾನ ಪ್ರಯಾಣದ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿದ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂಸದ, ಧೈರ್ಯವಿದ್ದರೆ ನನ್ನನ್ನು ತಡೆಯಲಿ ಎಂದು ಸವಾಲು ಹಾಕಿದ್ದಾರೆ. ಇಂದೇ ನಾನು ಮತ್ತೆ ಪ್ರಯಾಣ ಮಾಡುತ್ತೇನೆ. ಅದು ಯಾರು ಬಂದು ನನ್ನನ್ನು ತಡೆಯುತ್ತಾರೆಯೋ ನೋಡುತ್ತೇನೆ ಎಂದು ಪ್ರತಿ ಸವಾಲು ಹಾಕಿದ್ದಾರೆ.