ಆಸ್ಟ್ರೇಲಿಯಾದಲ್ಲಿ ಹಲ್ಲೆಗೊಳಗಾದ ಭಾರತೀಯ ಲಿ ಮ್ಯಾಕ್ಸ್ ಜಾಯ್
ಮೆಲ್ಬರ್ನ್: ಜನಾಂಗೀಯ ನಿಂದನೆಗಳು ಹೆಚ್ಚಾಗುತ್ತಿದ್ದು, ದೇಶದಲ್ಲಿ ಹಲ್ಲೆಗಳು ಮತ್ತು ಜನಾಂಗೀಯ ದ್ವೇಷದ ಅಪರಾಧಗಳು ಸಾಮಾನ್ಯವಾಗುತ್ತಿವೆ ಎಂದು ಆಸ್ಟ್ರೇಲಿಯಾದ ಹೋಬಾರ್ಟ್ ನಗರದ ಹೋಟೆಲ್ ಒಂದರಲ್ಲಿ ಯುವಕರಿಂದ ಹಲ್ಲೆಗೊಳಗಾದ ಭಾರತೀಯ ವ್ಯಕ್ತಿ ಹೇಳಿದ್ದಾರೆ.
ಕೇರಳ ಮೂಲದ ಲಿ ಮ್ಯಾಕ್ಸ್ ಜಾಯ್ ಆಸ್ಟ್ರೇಲಿಯಾದಲ್ಲಿ ಅಲ್ಪಾವಧಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಾರೆ. ಅವರ ಮೇಲೆ ಶನಿವಾರ ಉತ್ತರ ಹೋಬಾರ್ಟ್ ನ ಮೆಕ್ ಡೊನಾಲ್ಡ್ ಹೋಟೆಲ್ ನಲ್ಲಿ ಐವರು ಯುವಕರು ಹಲ್ಲೆಗೈದಿದ್ದರು. "ನೀವು ಬ್ಲಡಿ ಕಪ್ಪು ಭಾರತೀಯರು" ಇತ್ಯಾದಿಯಾಗಿ ನಿಂದಿಸಿದ್ದಲ್ಲದೆ ಹಲ್ಲೆ ಕೂಡ ನಡೆಸಿದ್ದರು ಎಂದು ಮರ್ಕ್ಯುರಿ ನಿಯತಕಾಲಿಕೆ ವರದಿ ಮಾಡಿದೆ.
ಕಾಫಿ ಕೊಳ್ಳಲು ಈ ಭಾರತೀಯ ವ್ಯಕ್ತಿ ಹೋಟೆಲ್ ಒಳಗೆ ಪ್ರವೇಶಿಸದಾಗ ಮೆಕ್ ಡೊನಾಲ್ಡ್ ಸಿಬ್ಬಂದಿಯೊಂದಿಗೆ ಬಿಸಿಚರ್ಚೆಯಲ್ಲಿ ಗ್ರಾಸವಾಗಿದ್ದ ಈ ಯುವಕರು ಕೋಪವನ್ನು ಲಿ ಮ್ಯಾಕ್ಸ್ ಮೇಲೆ ತೀರಿಸಿಕೊಂಡಿದ್ದಾರೆ.
"ಅವರಿಗೆ ಮೆಕ್ ಡೊನಾಲ್ಡ್ ಸಿಬ್ಬಂದಿ ಮೇಲೆ ಕೋಪವಿತ್ತು ಆದರೆ ಕಾರ್ ನಿಲ್ಲಿಸುವ ಪ್ರದೇಶದ ಬಳಿ ಮತ್ತು ಒಳಗೆ ಕೋಪವನ್ನು ನನ್ನ ಮೇಲೆ ತೋರಿಸಿಕೊಂಡರು" ಎಂದು ಜಾಯ್ ತಿಳಿಸಿದ್ದು, ೩೦-೪೦ ಬಾರಿ ಗುದ್ದಿ ಹಲ್ಲೆ ಮಾಡಿದ್ದಾಗಿ ತಿಳಿಸಿದ್ದಾರೆ.
"ಅವರಲ್ಲಿ ಮೂವರು ಹುಡುಗರು ನನ್ನ ಮುಖಕ್ಕೆ ಗುದ್ದಿ, ನೀನು ಬ್ಲಡಿ ಕಪ್ಪು ಭಾರತೀಯ ****, ಇಲ್ಲೇಕೆ ಇದ್ದೀಯ" ಎಂದು ನಿಂದಿಸಿದರು ಎಂದು ಲಿ ಆಸ್ಟ್ರೇಲಿಯಾದ ಎಸ್ ಬಿ ಎಸ್ ಟಿವಿ ವಾಹಿನಿಗೆ ಹೇಳಿದ್ದಾರೆ.
ಗಂಭೀರ ಗಾಯಗಳೊಂದಿಗೆ ಜಾಯ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಘಟನೆಯನ್ನು ಪೊಲೀಸರಿಗೆ ವರದಿ ಮಾಡಿದ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
"ಇದು ಡೊನಾಲ್ಡ್ ಟ್ರಂಪ್ ಎಫೆಕ್ಟ್" ಎಂದಿರುವ ಅವರು ಜನಾಂಗೀಯ ದ್ವೇಷ ಹೆಚ್ಚುತ್ತಿದೆ ಎಂದು ಕೂಡ ತಿಳಿಸಿದ್ದಾರೆ.
"ಜನಾಂಗೀಯ ನಿಂದನೆ ಹೆಚ್ಚುತ್ತಿದೆ. ನಿರಂತರವಾಗಿದೆ. ಹಲವಾರು ಚಾಲಕರು ಇದಕ್ಕೆ ತುತ್ತಾಗಿದ್ದಾರೆ ಆದರೆ ಎಲ್ಲರು ಇದನ್ನು ಪೊಲೀಸರಿಗೆ ತಿಳಿಸುವುದಿಲ್ಲ" ಎಂದು ಜಾಯ್ ಹೇಳಿದ್ದಾರೆ.
ಹೋಬಾರ್ಟ್ ನಲ್ಲಿ ಕುಟುಂಬದೊಂದಿಗೆ ೮ ವರ್ಷಗಳಿಂದ ಬದುಕುತ್ತಿರುವುದಾಗಿ ತಿಳಿಸುವ ಜಾಯ್ ಒಂದು ವಾರದ ಹಿಂದೆ ನಡೆದ ಇಂತಹುದೇ ಮತ್ತೊಂದು ಘಟನೆಯನ್ನು ಮೆಲುಕು ಹಾಕಿದ್ದಾರೆ.
"ಕಳೆದ ವಾರ ಗ್ಲೆನಾರ್ಚಿಯಲ್ಲಿ ಬಾಡಿಗೆಗಾಗಿ ಕಾಯುತ್ತಿದ್ದೆ, ಆಗ ಪ್ರಾಥಮಿಕ ಶಾಲೆಯ ಹುಡುಗನೊಬ್ಬ ಬಾಯಿಯಲ್ಲಿ ನೀರು ತುಂಬಿಸಿಕೊಂಡು ಬಂದು ಕಾರಿನ ಕಿಟಕಿಗೂ ಮತ್ತು ನನ್ನ ಮುಖಕ್ಕೂ ಉಗಿದ" ಎಂದು ಜಾಯ್ ಹೇಳಿದ್ದಾರೆ.
ಈ ಘಟನೆಯ ಬಗ್ಗೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ವಿವರವಾದ ಈಮೇಲ್ ಕೂಡ ಕಳುಹಿಸಿದ್ದಾರೆ. ಕಳೆದ ವರ್ಷ ಜೂನ್ ನಲ್ಲಿ ಹೋಬಾರ್ಟ್ ನಲ್ಲಿಯೇ ಜನಾಂಗೀಯ ದ್ವೇಷ ಪ್ರಕರಣದಲ್ಲಿ ಮತ್ತೊಬ್ಬ ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ ಮಾಡಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos