ಜಯಲಲಿತಾ 'ರಹಸ್ಯ ಪುತ್ರ'ನ ಬಂಧನಕ್ಕೆ ಮದ್ರಾಸ್ ಹೈ ಕೋರ್ಟ್ ಆದೇಶ!
ತಾನು ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ 'ರಹಸ್ಯ ಪುತ್ರ' ಎಂದು ಹೇಳಿಕೊಂಡು ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿಯನ್ನು...
ಚೆನ್ನೈ: ತಾನು ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ 'ರಹಸ್ಯ ಪುತ್ರ' ಎಂದು ಹೇಳಿಕೊಂಡು ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿಯನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ 'ರಹಸ್ಯ ಪುತ್ರ'ನ ಬಂಧನಕ್ಕೆ ಆದೇಶಿಸಿದೆ.
ತಾನು ಜಯಲಲಿತಾ ರಹಸ್ಯ ಪುತ್ರ ಅಂತ ಹೇಳಿಕೊಳ್ಳುತ್ತಿರುವ ಇರೊಡ್ ನಿವಾಸಿ ಜೆ ಕೃಷ್ಣಮೂರ್ತಿ, ಕೋರ್ಟ್ ಗೆ ಮಾತ್ರ ವಂಚಿಸಿಲ್ಲ, ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದು, ಆತನನ್ನು ಬಂಧಿಸುವಂತೆ ನ್ಯಾಯಮೂರ್ತಿ ಆರ್ ಮಹಾದೇವನ್ ಅವರು ಆದೇಶಿಸಿದ್ದಾರೆ.
ನಾನು ಜಯಲಲಿತಾ ಅವರ ಮಗ ಎಂದು ಹಾಗೂ ಮಾಜಿ ಮುಖ್ಯಮಂತ್ರಿಯ ಎಲ್ಲಾ ಅಸ್ತಿಗೆ ನಾನೆ ಅಧಿಕೃತ ವಾರಸುದಾರ ಎಂದು ಘೋಷಿಸುವಂತೆ ಕೋರಿ ಕೃಷ್ಣಮೂರ್ತಿ ಕೋರ್ಟ್ ಅರ್ಜಿ ಸಲ್ಲಿಸಿದ್ದರು. ನಾನು ಜಯಲಲಿತಾ ಹಾಗೂ ದಿ. ತೆಲುಗು ನಟ ಶೋಬನ್ ಬಾಬು ಅವರಿಗೆ ಜನಿಸಿರುವುದಾಗಿ ಹೇಳಿಕೊಂಡಿದ್ದ ಕೃಷ್ಣಮೂರ್ತಿ ಈ ಸಂಬಂಧ ಕೆಲವು ದಾಖಲೆಗಳನ್ನು ಸಹ ಕೋರ್ಟ್ ಸಲ್ಲಿಸಿದ್ದರು. ಆದರೆ ಕೃಷ್ಣಮೂರ್ತಿ ಸಲ್ಲಿಸಿದ ದಾಖಲೆಗಳ ಬಗ್ಗೆ ಅನುಮಾನಗೊಂಡ ನ್ಯಾಯಾಧೀಶರು ಈ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದರು.
ಕೃಷ್ಣಮೂರ್ತಿ ಸಲ್ಲಿಸಿದ್ದ ದಾಖಲೆಗಳ ಬಗ್ಗೆ ತನಿಖೆ ನಡೆಸಿ ಪೊಲೀಸರು ವರದಿ ನೀಡಿದ್ದು, ಆ ಎಲ್ಲಾ ದಾಖಲೆಗಳು ನಕಲಿ ಎಂದು ಸಾಬೀತಾಗಿದೆ. ಹೀಗಾಗಿ ಆರೋಪಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕೋರ್ಟ್ ಪೊಲೀಸರಿಗೆ ಸೂಚಿಸಿದೆ.