ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮಾಜಿ ಅಧ್ಯಕ್ಷ ಲಲಿತ್ ಮೋದಿ
ನವದೆಹಲಿ: ಲಂಚ ಹಗರಣದಲ್ಲಿ ಆರೋಪಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರಿಗೆ ರೆಡ್ ನೋಟಿಸ್ ನೀಡಲು ಇಂಟರ್ ಪೋಲ್ ನಿರಾಕರಿಸಿದೆ.
"ನಾನು ಬಾರ್ಸಿಲೋನಾ ವಿಮಾನದಿಂದ ಈಗಷ್ಟೇ ಇಳಿದೆ. ವಿಮಾನ ಹತ್ತುವಾಗಷ್ಟೇ ನನಗೆ ಕರೆ ಬಂತು ಮತ್ತು ಇಂಟರ್ ಪೋಲ್ ನನ್ನ ವಿರುದ್ಧದ ತನಿಖೆ ಸಂಪೂರ್ಣಗೊಳಿಸಿದ್ದು, ನನ್ನ ಪರವಾಗಿ ತೀರ್ಪು ನೀಡಿದ್ದಾಗಿ ತಿಳಿದುಬಂತು. ನನ್ನ ವಿರುದ್ಧ ರೆಡ್ ನೋಟಿಸ್ ಹೊರಡಿಸುವ ಭಾರತದ ಮನವಿಯನ್ನು ಅದು ತಿರಸ್ಕರಿಸಿ ವಿವರವಾದ ಪಾತ್ರ ಬರೆದಿದೆ" ಎಂದು ಮೋದಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
"ನನ್ನ ಮೇಲೆ ತೂಗಾಡುತ್ತಿದ್ದ ಕತ್ತಿ ಜಾಗ ಖಾಲಿ ಮಾಡಿದೆ" ಎಂದು ಕೂಡ ಮೋದಿ ಬರೆದಿದ್ದಾರೆ.
ಮಾರ್ಚ್ ೨೪ ರ ದಿನಾಂಕ ಹೊತ್ತ ಇಂಟರ್ ಪೋಲ್ ದಾಖಲೆ ತಿಳಿಸಿರುವಂತೆ "ಲಲಿತ್ ಕುಮಾರ್ ಮೋದಿ... ಇಂಟರ್ ಪೋಲ್ ರೆಡ್ ನೋಟಿಸ್ ಗೆ ವಿಷಯವಲ್ಲ ಮತ್ತು ಇಂಟರ್ ಪೋಲ್ ದಾಖಲೆಯಲ್ಲಿ ಇವರ ವಿವರಗಳಿಲ್ಲ" ಎಂದಿದೆ.
ಇದರ ಬಗ್ಗೆ ಸ್ಪಷ್ಟಿಕರಣ ನೀಡಿರುವ ಸಂಸ್ಥೆ "ಈ ಹಿಂದೆ ಈ ವ್ಯಕ್ತಿ (ಲಲಿತ್ ಮೋದಿ) ಇಂಟರ್ ಪೋಲ್ ಡೇಟಾಬೇಸ್ ದಾಖಲೆಗಳಲ್ಲಿ ಇದ್ದರು, ಆದರೆ ನಂತರ ಆ ವಿವರಗಳನ್ನು ಅಲ್ಲಿಂದ ತೆಗೆದು ಹಾಕಲಾಗಿದೆ" ಎಂದು ತಿಳಿಸಿದೆ.
ಐಪಿಎಲ್ ನಲ್ಲಿ ಹಗರಣದ ಆರೋಪ ಎದುರಿಸುತ್ತಿರುವ ಲಲಿತ್ ೨೦೧೦ರಲ್ಲಿ ಭಾರತ ತೊರೆದು ಓಡಿಹೋಗಿದ್ದರು. ಈಗ ಅವರು ಬ್ರಿಟನ್ ನಲ್ಲಿ ವಾಸವಾಗಿದ್ದು, ಅವರ ಗಡಿಪಾರು ಮನವಿ ಇನ್ನು ಜಾರಿಯಲ್ಲಿದೆ.
ಲಲಿತ್ ಮೋದಿ ಹಂಚಿಕೊಂಡಿರುವ ದಾಖಲೆಗಳ ಸತ್ಯಾಸತ್ಯತೆ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಸಿಬಿಐ ವಕ್ತಾರ ಆರ್ ಕೆ ಗೌರ್ "ಇಂಟರ್ ಪೋಲ್ ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದೇವೆ" ಎಂದಿದ್ದಾರೆ.