ಬೆಂಗಳೂರು: ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಆಡಳಿತಾವಧಿ ಮುಂದಿನ ಜುಲೈ ತಿಂಗಳಲ್ಲಿ ಅಂತ್ಯಗೊಳ್ಳಲಿದ್ದು, ಮುಂದಿನ ರಾಷ್ಟ್ರಪತಿ ಯಾರಾಗಲಿದ್ದಾರೆ ಎಂಬುದರ ಬಗ್ಗೆ ತೀವ್ರ ಚರ್ಚೆ ಆರಂಭವಾಗಿದೆ. ಇತ್ತೀಚಿಗಷ್ಟೆ ಬಿಜೆಪಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೆಸರು ಕೇಳಿ ಬಂದಿತ್ತು. ಈಗ ಅವರನ್ನು ಬೆಂಬಲಿಸಿ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ರೈಲ್ವೆ ಸಚಿವ ಜಾಫರ್ ಷರೀಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಮೋಹನ್ ಭಾಗವತ್ ಅವರ ದೇಶ ಪ್ರೇಮದ ಬಗ್ಗೆ ಯಾವುದೇ ಅನುಮಾನ ಬೇಡ. ಅವರು ರಾಷ್ಟ್ರಪತಿಯಾಗಲು ಅರ್ಹರಿದ್ದಾರೆ. ಅವರು ರಾಷ್ಟ್ರಪತಿಯಾದರೆ ತಪ್ಪೇನು ಇಲ್ಲ ಎಂದು ಮೋದಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ.
ಭಾರತದಲ್ಲಿ ವಿಚಾರದಾರೆಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ಶಾಲೆಗಳಿವೆ ಮತ್ತು ಅತಿ ದೊಡ್ಡ ದೇಶದಲ್ಲಿ ಇದು ಸಾಮಾನ್ಯ. ಮೋಹನ್ ಭಾಗವತ್ ಅವರು ಸಹ ಅಂತಹ ಒಂದು ವಿಚಾರಧಾರೆಯ ಶಾಲೆಗೆ ಸೇರಿದವರಾಗಿದ್ದಾರೆ. ಅವರ ದೇಶ ಪ್ರೇಮದ ಬಗ್ಗೆ ಯಾವುದೇ ಅನುಮಾನ ಬೇಡ. ದೇಶದ ಜನತೆಯನ್ನು ಪ್ರೀತಿಸುತ್ತಾರೆ ಎಂದು ಷರೀಫ್ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ಕೇಂದ್ರದಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಮುಂದಿನ ರಾಷ್ಟ್ರಪತಿ ಸ್ಥಾನಕ್ಕೆ ಮೋಹನ್ ಭಾಗವತ್ ಅವರನ್ನು ಸ್ಪಷ್ಟವಾಗಿ ವಿರೋಧಿಸಿದ್ದು, ಆರ್ಎಸ್ಎಸ್ ಸಿದ್ಧಾಂತಗಳನ್ನು ನಾವು ಬೆಂಬಲಿಸುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರ ಗೌರವ್ ಗೋಗೊಯಿ ಅವರು ಹೇಳಿದ್ದಾರೆ.
ಇತ್ತೀಚಿಗಷ್ಟೆ ಭಾಗವತ್ ಅವರ ಹೆಸರು ರಾಷ್ಟ್ರಪತಿ ಹುದ್ದೆಗೆ ಪರಿಗಣಿಸುವಂತೆ ಶಿವಸೇನೆ ಒತ್ತಾಯಿಸಿತ್ತು. ಆದರೆ ನಾನು ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸ್ವತಃ ಮೋಹನ್ ಭಾಗವತ್ ಅವರೇ ಸ್ಪಷ್ಟಪಡಿಸಿದ್ದಾರೆ. ಆದರೂ ಅವರನ್ನು ಬೆಂಬಲಿಸಿ ಕಾಂಗ್ರೆಸ್ ನಾಯಕರೊಬ್ಬರು ಪ್ರಧಾನಿಗೆ ಪತ್ರ ಬರೆದಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.