ನವದೆಹಲಿ: ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಈಗ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಸಾಲದ ದೊರೆಯ ಗಡಿಪಾರಿನ ಬಗ್ಗೆ ಚರ್ಚಿಸಲು ಮತ್ತು ಕಾನೂನು ಪ್ರಕ್ರಿಯೆ ತ್ವರಿತಗೊಳಿಸಲು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳ ಜಂಟಿ ತಂಡ ಮಂಗಳವಾರ ಲಂಡನ್ ತಲುಪಿದೆ.
ಸಿಬಿಐ ಹೆಚ್ಚುವರಿ ನಿರ್ದೇಶಕ ರಾಕೇಶ್ ಅಸ್ತಾನ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ಇಂದು ಲಂಡನ್ ತಲುಪಿದ್ದು, ವಿಜಯ್ ಮಲ್ಯ ವಿರುದ್ಧದ ಪ್ರಕರಣಗಳ ಬಗ್ಗೆ ಬ್ರಿಟನ್‌ನ ಅಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಮಲ್ಯ ಗಡಿಪಾರು ವಿಚಾರ ಸದ್ಯ ಬ್ರಿಟನ್‌ನ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಮಲ್ಯ ವಿರುದ್ಧ ವಾದ ಮಂಡಿಸುವ ಬ್ರಿಟನ್‌ನ ವಕೀಲರಿಗೆ ನೆರವಾಗುವುದು ಮತ್ತು ಪ್ರಕರಣಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಕಾನೂನು ಪ್ರಕ್ರಿಯೆ ಚುರುಕುಗೊಳಿಸುವುದು ಈ ತಂಡದ ಉದ್ದೇಶವಾಗಿದೆ.
ವಿವಿಧ ಬ್ಯಾಂಕ್‌ಗಳಿಂದ ಪಡೆದ ಸುಮಾರು 9,000 ಕೋಟಿ ರುಪಾಯಿ ಸಾಲ (ಬಡ್ಡಿ ಸೇರಿ) ಮರುಪಾವತಿ ಮಾಡದೆ ಬ್ರಿಟನ್‌ನಲ್ಲಿ ನೆಲೆಸಿರುವ ಮಲ್ಯ ಅವರನ್ನು ಅಲ್ಲಿನ ಪೊಲೀಸರು ಕಳೆದ ತಿಂಗಳು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ವಿಚಾರಣೆಯನ್ನು ಬ್ರಿಟನ್‌ನ ನ್ಯಾಯಾಲಯ ಮೇ 17ಕ್ಕೆ ನಿಗದಿಪಡಿಸಿದೆ.