ನವದೆಹಲಿ: ರಾಜ್ಯದಲ್ಲಿ ಮದ್ಯ ನಿಷೇಧ ಕಾಯ್ದೆ ಜಾರಿಯಾದ ಹಿನ್ನಲೆಯಲ್ಲಿ ವಿಜಯ್ ಮಲ್ಯ ಅವರ ಯುನೈಟೆಡ್ ಬ್ರ್ಯುವರಿಸ್ ಬಿಹಾರದಲ್ಲಿ ಉತ್ಪಾದನಾ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ.
"ಏಪ್ರಿಲ್ ೨೦೧೭ ರಿಂದ ಜಾರಿಯಾದ ಮದ್ಯ ನಿಷೇಧ ಕಾಯ್ದೆಯ ಪರಿಣಾಮವಾಗಿ ಪಾಟ್ನಾ ಜಿಲ್ಲೆಯ ನೌಬತ್ಪುರದಲ್ಲಿದ್ದ ಸಂಸ್ಥೆಯ ಉತ್ಪಾದನಾ ಕೇಂದ್ರದ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದೇವೆ" ಎಂದು ಯುನೈಟೆಡ್ ಬ್ರ್ಯುವರಿಸ್ ಲಿಮಿಟೆಡ್ (ಯುಬಿಎಲ್) ತಿಳಿಸದೆ.
ಏಪ್ರಿಲ್ ೧ ರಿಂದ ಪ್ರಾದೇಶಿಕವಾಗಿ ಮದ್ಯದ ಉತ್ಪಾದನೆ, ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿ ಬಿಹಾರದ ಮಹಾ ಘಟಬಂಧನ ಸರ್ಕಾರ ಆದೇಶ ಹೊರಡಿಸಿತ್ತು, ನಂತರ ಈ ನಿಷೇಧವನ್ನು ವಿದೇಶಿ ಮದ್ಯಗಳಿಗೂ ಅನ್ವಯವಾಗುವಂತೆ ಮಾಡಿ ಸಂಪೂರ್ಣ ನಿಷೇಧ ಹೇರಿತ್ತು.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸರ್ಕಾರದ ಸಂಪೂರ್ಣ ಮದ್ಯ ನಿಷೇಧ ಕಾಯ್ದೆಯನ್ನು ಪಾಟ್ನಾ ಹೈಕೋರ್ಟ್ ತೆರವು ಮಾಡಿತ್ತು. ಬಿಹಾರ ಸರ್ಕಾರ ಪಾಟ್ನಾ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ ಎಂದು ಯುಬಿಎಲ್ ತಿಳಿಸಿದೆ.
ಯುಬಿಎಲ್ ಒಡೆತನದ ೨೧ ಉತ್ಪಾದನಾ ಸಂಸ್ಥೆಗಳು ದೇಶದಾದ್ಯಂತ ಕಾರ್ಯಚಟುವಟಿಕೆ ನಡೆಸುತ್ತಿದ್ದವು. ಬಿಹಾರದಲ್ಲಿ ಕೇವಲ ಒಂದು ಉತ್ಪಾದನಾ ಸಂಸ್ಥೆ ಇತ್ತು.