ನವದೆಹಲಿ: ಕಣಿವೆ ರಾಜ್ಯದಲ್ಲಿ ಹಿಂಸಾಚಾರ ವ್ಯಾಪಕವಾಗಿರುವ ಬೆನ್ನಲ್ಲೇ ಭಾರತೀಯ ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಹೇಳಲಾಗುತ್ತಿದೆ.
ಆಂಗ್ಲ ದೈನಿಕವೊಂದು ವರದಿ ಮಾಡಿರುವಂತೆ ಪ್ರಸ್ತುತ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತಣ್ಣಗಾಗಲು ಕೂಡಲೇ ರಾಷ್ಟ್ರಪತಿ ಆಡಳಿತ ಹೇರುವಂತೆ ಭಾರತೀಯ ಸೇನೆಯ ತಜ್ಞರು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದು ವರದಿ ಮಾಡಲಾಗಿದೆ. ಪ್ರತ್ಯೇಕತಾವಾದಿಗಳ ಕುಮ್ಮಕ್ಕು ಹಾಗೂ ಉಗ್ರ ಸಂಘಟನೆಗಳ ನೆರವಿನಿಂದಾಗಿ ಅಶಾಂತಿಯಿಂದ ಹೊತ್ತಿ ಉರಿಯುತ್ತಿರುವ ಕಾಶ್ಮೀರದಲ್ಲಿ ಬಂಡುಕೋರ ಶಕ್ತಿಗಳನ್ನು ನಿಗ್ರಹಿಸಲು ರಾಜ್ಯಪಾಲರ ಆಳ್ವಿಕೆ ಜಾರಿಗೊಳಿಸುವಂತೆ ಅನಿವಾರ್ಯವೆಂದು ಭದ್ರತಾ ಪಡೆಗಳು ಕೇಂದ್ರಕ್ಕೆ ಶಿಫಾರಸು ಮಾಡಿವೆ ಎನ್ನಲಾಗಿದೆ.
ಇನ್ನು ವರದಿಯಲ್ಲಿ ಕಾಶ್ಮೀರದಲ್ಲಿ ಈಗಷ್ಟೇ ಬೇಸಿಗೆ ಆರಂಭವಾಗಿರುವುದರಿಂದ ಉಗ್ರರ ಒಳನುಸುಳುವಿಕೆ ಪ್ರಮಾಣ ಹೆಚ್ಚಳವಾಗುವ ಸಂಭವವಿದೆ. ಇದೇ ಸಂದರ್ಭದಲ್ಲಿ ಆಂತರಿಕ ಹಿಂಸಾಚಾರವನ್ನು ಉಗ್ರರು ತಮ್ಮ ಕುಕೃತ್ಯಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಇದ್ದು, ಇದೇ ಕಾರಣಕ್ಕೆ ಭದ್ರತಾ ಪಡೆಗಳು ಕೇಂದ್ರ ಸರ್ಕಾರಕ್ಕೆ ಈ ಶಿಫಾರಸ್ಸು ಮಾಡಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಯಾದರೆ ಕಾಶ್ಮೀರದ ಒಟ್ಟಾರೆ ಭದ್ರತಾ ಪರಿಸ್ಥಿತಿ ಸುಧಾರಿಸಬಹುದು ಎಂದೂ ಭದ್ರತಾ ಪಡೆಗಳು ವಾದಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪಿಡಿಪಿ-ಬಿಜೆಪಿ ಮೈತ್ರಿಯೇ ಹಿಂಸಾಚಾರಕ್ಕೆ ಕಾರಣ?
ವರದಿಯಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಪ್ರಸ್ತುತ ಕಾಶ್ಮೀರದಲ್ಲಿ ಉಂಟಾಗಿರುವ ಅಶಾಂತಿ ಪರಿಸ್ಥಿತಿಗೆ ಪಿಡಿಪಿ-ಬಿಜೆಪಿ ಮೈತ್ರಿಯೇ ಕಾರಣ ಎಂದು ಅಭಿಪ್ರಾಯಪಡಲಾಗಿದೆ. ಸೈದ್ಧಾಂತಿಕವಾಗಿ ವಿರುದ್ಧ ದಿಕ್ಕಿನಲ್ಲಿರುವ ಪಿಡಿಪಿ ಹಾಗೂ ಬಿಜೆಪಿ ಮೈತ್ರಿಯೂ ಕಾಶ್ಮೀರಿಗಳ ಆಕ್ರೋಶಕ್ಕೆ ಕಾರಣ. ಒಂದು ವೇಳೆ ರಾಜ್ಯಪಾಲರ ಆಳ್ವಿಕೆ ಜಾರಿಯಾದರೆ ಈ ಒಂದು ಅಂಶ ಬೀರುವ ಪರಿಣಾಮವನ್ನು ತೊಡೆದು ಹಾಕಬಹುದು ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರ ಜತೆಗೆ ಕಲ್ಲು ತೂರಾಟ ನಡೆಸುವ ಪ್ರತಿಭಟನಾಕಾರರ ಕೆಲ ನಾಯಕರನ್ನು ಹೊರರಾಜ್ಯಗಳಿಗೆ ಸ್ಥಳಾಂತರಿಸಲು ಆಗದಿದ್ದರೆ, ಕಣಿವೆಯಿಂದಲಾದರೂ ಹೊರಕ್ಕೆ ಕಳುಹಿಸಬೇಕು ಎಂಬುದು ಭದ್ರತಾ ಪಡೆಗಳ ಮತ್ತೊಂದು ಬೇಡಿಕೆಯಾಗಿದೆ ಎಂದು ಹೇಳಲಾಗಿದೆ.
ಆಡಳಿತಾರೂಢ ಪಿಡಿಪಿಯ ಭದ್ರಕೋಟೆಯಾಗಿರುವ ದಕ್ಷಿಣ ಕಾಶ್ಮೀರದಲ್ಲಿ ದೇಶಿ ಭಯೋತ್ಪಾದನೆ ಹೆಚ್ಚಾಗಿರುವುದು ಭದ್ರತಾ ಪಡೆಗಳ ಕಳವಳಕ್ಕೆ ಕಾರಣ. ಉಗ್ರರು ಭದ್ರತಾ ಸಿಬ್ಬಂದಿ ಶಸ್ತ್ರಾಸ್ತ್ರ ಕಿತ್ತು ಕೊಳ್ಳುವುದು ಇಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಹೀಗಾಗಿ ರಾಜ್ಯಪಾಲರ ಆಳ್ವಿಕೆಗೆ ಭದ್ರತಾ ಪಡೆಗಳು ಕೋರಿಕೆ ಇಟ್ಟಿವೆ ಎನ್ನಲಾಗುತ್ತಿದೆ.
ಕೇಂದ್ರಾಡಳಿತ ಕಾಶ್ಮೀರದಲ್ಲಿ ಸಾಂವಿಧಾನಿಕ ವ್ಯವಸ್ಥೆ ಕುಸಿದು ಬಿದ್ದರೆ ಆರು ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆ ಹೇರಬಹುದಾಗಿದೆ. ಅದಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಬೇಕು.