ಬೆಂಗಳೂರು: ಅಕ್ರಮ ಗಣಿಕಾರಿಕೆ ಪ್ರಕರಣ ಸಂಬಂಧ ಬಂಧನ ಭೀತಿ ಎದುರಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರಿಗೆ ಬುಧವಾರ ಸೆಷನ್ಸ್ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ನಿರೀಕ್ಷಣಾ ಜಾಮೀನು ಕೋರಿ ಎಚ್ ಡಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್, 5 ಲಕ್ಷ ರುಪಾಯಿ ಬಾಂಡ್ ಹಾಗೂ ಒಬ್ಬರ ಶೂರಿಟಿ ಮೇಲೆ ಮಾಜಿ ಸಿಎಂಗೆ 7 ದಿನಗಳ ಕಾಲ ಮಧ್ಯಂತರ ಜಾಮೀನು ನೀಡಿದೆ. ಆದರೆ ಅನುಮತಿ ಇಲ್ಲದೆ ವಿದೇಶ ಪ್ರವಾಸಕ್ಕೆ ತೆರಳದಂತೆ ಷರತ್ತು ವಿಧಿಸಿದೆ.
ಇದೇ ವೇಳೆ ನಿರೀಕ್ಷಣಾ ಜಾಮೀನು ಅರ್ಜಿಯ ಬಗ್ಗೆ ಆಕ್ಷೆಪಣೆ ಸಲ್ಲಿಸಲು ಜಂತಕಲ್ ಮೈನಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ವಕೀಲರಿಗೆ ಒಂದು ವಾರ ಕಾಲವಕಾಶ ನೀಡಿ ವಿಚಾರಣೆಯನ್ನು ಮೇ 24ಕ್ಕೆ ಮುಂದೂಡಿದೆ.
ಜಂತಕಲ್ ಮೈನಿಂಗ ಕಂಪೆನಿಯ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಇತ್ತೀಚಿಗೆ ಹಿರಿಯ ಐಎಎಸ್ ಅಧಿಕಾರಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಅವರನ್ನು ಬಂಧಿಸಿದ ನಂತರ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೂ ಬಂಧನ ಭೀತಿ ಎದುರಾಗಿತ್ತು.
ಜಂತರಲ್ ಮೈನಿಂಗ್ ಸಂಸ್ಥೆಯಿಂದ 10 ಲಕ್ಷ ರು. ಲಂಚ ಪಡೆದ ಆರೋಪದ ಮೇರೆಗೆ ಹಿರಿಯ ಐಎಎಸ್ ಅಧಿಕಾರಿ ಗಂಗಾರಾಂ ಬಡೇರಿಯಾರ ಅವರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಿದ್ದಂತೆ, ಈ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಜಂತಕಲ್ ಮೈನಿಂಗ್ ಕಂಪನಿಯಿಂದ ಅದಿರು ಸಾಗಣೆಗೆ ಅನುಮತಿ ನೀಡುವಂತೆ ಅಂದಿನ ಸಿಎಂ ಕುಮಾರಸ್ವಾಮಿ ಒತ್ತಡ ಹೇರಿದ್ದರು ಎಂದು ಗಂಗಾರಾಮ್ ಬಡೇರಿಯಾ ಈ ಹಿಂದೆ ಆರೋಪ ಮಾಡಿದ್ದರು. ಅದೇ ಕಾರಣಕ್ಕೆ ವಿಚಾರಣೆಗೆ ಹಾಜರಾಗಲು ಎಚ್‌ಡಿಕೆ ಅವರಿಗೂ ಶೀಘ್ರದಲ್ಲೇ ಎಸ್‌ಐಟಿ ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics