ನವದೆಹಲಿ: ಮುಸ್ಲಿಮರಲ್ಲಿರುವ ವಿವಾದಾತ್ಮಕ ತ್ರಿವಳಿ ತಲಾಖ್ ನ ಸಂವಿಧಾನಾತ್ಮಕ ಮಾನ್ಯತೆ ಕುರಿತು ವಾದ-ಪ್ರತಿ ಆಲಿಸಿರುವ ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠ ಗುರುವಾರ ತೀರ್ಪು ಕಾಯ್ದರಿಸಿದೆ.
ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೆಹರ್ ನೇತೃತ್ವದ ಸುಪ್ರೀಂ ಪೀಠ ಕಳೆದ ಆರು ದಿನಗಳಿಂದ ವಿಚಾರಣೆಯನ್ನು ಇಂದು ಅಂತ್ಯಗೊಳಿಸಿದ್ದು, ತೀರ್ಪು ಕಾಯ್ದಿರಿಸಿದೆ.
ನಿನ್ನೆ ತ್ರಿವಳಿ ತಲಾಖ್ ವಿರುದ್ಧ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ಮುಸ್ಲಿಂ ಕಾನೂನು ಮಂಡಳಿ ಪರ ನ್ಯಾಯವಾದಿ ಕಪಿಲ್ ಸಿಬಲ್ ಎತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸುವ ರೀತಿಯಲ್ಲೇ ಪ್ರತಿಕ್ರಿಯಿಸಿತು. ತ್ರಿವಳಿ ತಲಾಖ್ ಅನ್ನು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವಿನ ತಾರತಮ್ಯ ಎಂದು ನೋಡಬೇಡಿ. ಇದು ಉಳ್ಳವರು (ಪುರುಷರು) ಮತ್ತು ಇಲ್ಲದವರು (ಮಹಿಳೆಯರ) ನಡುವಿನ ಹೋರಾಟ. 25 ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಈ ಪದ್ಧತಿ ಇಲ್ಲ ಎಂದಾದ ಮೇಲೆ ಅದು ಇಸ್ಲಾಂನಲ್ಲಿ ಕಡ್ಡಾಯ ಎಂದು ಹೇಳಲಾಗದು ಎಂದಿದ್ದರು.
ಮಂಗಳವಾರವಷ್ಟೇ ವಾದಿಸಿದ್ದ ಸಿಬಲ್, ಹಿಂದೂಗಳು ಅಯೋಧ್ಯೆ ಹೇಗೆ ರಾಮಜನ್ಮಭೂಮಿ ಎಂದು ನಂಬಿದ್ದಾರೋ, ತ್ರಿವಳಿ ತಲಾಖ್ ಕೂಡ ಮುಸ್ಲಿಮರ ನಂಬಿಕೆಯ ಪ್ರಶ್ನೆ. ಅದನ್ನು 1400 ವರ್ಷಧಿಗಳಿಂದಲೂ ಆಚರಿಸಲಾಗುತ್ತಿದೆ ಎಂದಿದ್ದರು.