ಪ್ರಧಾನ ಸುದ್ದಿ

ಚುನಾವಣಾ ಆಯೋಗ ನಡೆಸಿದ ಇವಿಎಂ, ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಯಶಸ್ವಿ, ಮತಯಂತ್ರ ತಿರುಚಲು ಅಸಾಧ್ಯ

Lingaraj Badiger
ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಶನಿವಾರ ನಡೆಸಿದ ವಿದ್ಯುನ್ಮಾನ ಮತಯಂತ್ರ(ಇವಿಎಂ) ಹಾಗೂ ವಿವಿಪ್ಯಾಟ್‌ (VVPAT–voter verifiable paper audit trail) ಪ್ರಾತ್ಯಕ್ಷಿಕೆ ಯಶಸ್ವಿಯಾಗಿದ್ದು, ಈ ಮೂಲಕ ಮತಯಂತ್ರಗಳಲ್ಲಿನ ದೋಷದಿಂದಾಗಿಯೇ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂಬ ಪ್ರತಿಪಕ್ಷಗಳ ಗಂಭೀರ ಆರೋಪಕ್ಕೆ ತೆರೆ ಎಳೆಯಲಾಗಿದೆ.
ಇವಿಎಂ ತಿರುಚಲಾಗಿದೆ ಎಂದು ಆರೋಪ ಮಾಡುವುದು ತಪ್ಪು ಎಂದು ಪ್ರಾತ್ಯಕ್ಷಿಕೆ ನಡೆಸಿದ ಭಾರತೀಯ ವಿದ್ಯುನ್ಮಾನ ನಿಗಮ ಲಿಮಿಟೆಡ್(ಇಸಿಐಎಲ್) ನ ತಾಂತ್ರಿಕ ಅಧಿಕಾರಿ ಬಿ.ಪಿ.ಮಿಶ್ರ ಅವರು ಹೇಳಿದ್ದಾರೆ.
ಇವಿಎಂ ತಿರುಚಲು ಸಾಧ್ಯವೇ ಇಲ್ಲ. ಇವಿಎಂ ತಿರುಚಲಾಗಿದೆ ಎಂದು ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಮಿಶ್ರಾ ಅವರು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಮಷಿನ್ ಗಳಿಗೆ ಸ್ವಯಂಚಾಲಿತ ಪ್ರಿಂಟರ್ ಇದ್ದು, ಮತದಾರ ಬಟನ್ ಒತ್ತಿದ ಕೂಡಲೇ ಮತದಾರ ಹಾಗೂ ಅಭ್ಯರ್ಥಿಯ ಹೆಸರಿರುವ ಚೀಟಿ ಬರುತ್ತದೆ ಎಂದು ಪ್ರಾತ್ಯಕ್ಷಿಕೆ ನಡೆಸಿದ ಮತ್ತೊಬ್ಬ ಇಸಿಐಎಲ್ ನೌಕರ ಖರೇಶ್ ಯಾದವ್ ಅವರು ತಿಳಿಸಿದ್ದಾರೆ.
ಇನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಿ ಇವಿಎಂಗಳನ್ನು ಸಿದ್ಧಪಡಿಸಲಾಗಿದ್ದು, ಇವುಗಳನ್ನು ತಿರುಚಲ ಸಾಧ್ಯವಿಲ್ಲ. ಒಂದು ವೇಳೆ ಸಾಧ್ಯವಿದೆ ಎನ್ನುವದಾದರೆ ಜೂನ್ 3ರಿಂದ ಹ್ಯಾಕ್ ಮಾಡಿ ತೋರಿಸುವಂತೆ ಮುಖ್ಯ ಚುನಾವಣಾ ಆಯುಕ್ತ ನಜೀಂ ಜೈದಿ ಅವರು ಸವಾಲು ಹಾಕಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡಿದ್ದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಜಯಗಳಿಸಿದ್ದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಮತಯಂತ್ರಗಳಲ್ಲಿ ವ್ಯಾಪಕ ಅಕ್ರಮ ನಡೆದಿದ್ದು. ದೋಷಪೂರಿತ ಮತಯಂತ್ರಗಳಿಂದ ಬಿಜೆಪಿಗೆ ಹೆಚ್ಚಿನ  ಮತಗಳು ಲಭಿಸಿವೆ. ಮತಯಂತ್ರದ ಯಾವುದೇ ಬಟನ್ ಒತ್ತಿದರೂ ಬಿಜೆಪಿಗೆ ಮತ ಬೀಳುವಂತೆ ರಚಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿತ್ತು. ಇದಕ್ಕೆ ಬಿಎಸ್ಪಿ, ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿವಿಧ ಪ್ರತಿಪಕ್ಷಗಳು ಬೆಂಬಲ  ನೀಡಿ ಮತ್ತೆ ಈ ಹಿಂದಿನ ಬ್ಯಾಲಟ್ ಪೇಪರ್ ವ್ಯವಸ್ಥೆಯನ್ನು ತರುವಂತೆ ಆಗ್ರಹಿಸಿದ್ದವು.
SCROLL FOR NEXT