ಪಾಟ್ನಾ: ವೇದ ಅಧ್ಯಯನ ಪರಿಚಯಿಸುವುದಕ್ಕೆ ನಳಂದ ವಿಶ್ವವಿದ್ಯಾಲಯ ಯೋಜನೆ ರೂಪಿಸಿದ್ದು, ಮನಸ್ಸು ಮತ್ತು ಯೋಗ ಎಂಬ ವಿಷಯವನ್ನು ಕೂಡ ಪ್ರಾರಂಭಿಸುವ ಇರಾದೆಯಲ್ಲಿದೆ.
"ಈಗ ಇರುವ ಶಾಲೆಗಳ ಜೊತೆಗೆ ನಾವು ಹೊಸ ವಿಭಾಗಗಳನ್ನು ಪ್ರಾರಂಭಿಸಬೇಕಿದೆ" ಎಂದು ಉಪಕುಲಪತಿ ಸುನೈನಾ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಉದಾಹರಣೆಗೆ ಬೌದ್ಧ ಅಧ್ಯಯನ, ಧರ್ಮಗಳ ತೌಲನಿಕ ಅಧ್ಯಯನ ಮತ್ತು ತತ್ವಶಾಸ್ತ್ರ ಶಾಲೆಯಲ್ಲಿ ವೇದ ಅಧ್ಯಯನ, ಭಾರತೀಯ ಆಧ್ಯಾತ್ಮಿಕ ಸಂಪ್ರದಾಯ ಮತ್ತು ಶಾಂತಿ ಅಧ್ಯಯನವನ್ನು ಪರಿಚಯಿಸುವ ಇರಾದೆಯಿದೆ" ಎಂದು ಸಿಂಗ್ ಹೇಳಿದ್ದಾರೆ.
ಭಾರತ, ಏಷ್ಯಾ ಮತ್ತು ಏಷಿಯಾ-ಫೆಸಿಪಿಕ್ ರಾಷ್ಟ್ರಗಳ ನಡುವಿನ ಬೌದ್ಧಿಕ ಸೇತುವೆ ನಳಂದ ವಿಶ್ವವಿದ್ಯಾಲಯವಾಗಿದ್ದು, ಪಶ್ಚಿಮ, ಭಾರತವನ್ನು ಸಮಸ್ಯೆ ಪರಿಹಾರ ಕೇಂದ್ರವಾಗಿ ನೋಡುತ್ತದೆ ಎಂದಿದ್ದಾರೆ.
"ಭಾರತೀಯ ಜ್ಞಾನ ಶಾಖೆಗಳನ್ನು ಮತ್ತಷ್ಟು ಶೋಧಿಸಬೇಕಿದೆ" ಎಂದು ಕೂಡ ಸಿಂಗ್ ಹೇಳಿದ್ದಾರೆ.
"ಮನಸ್ಸು ಮತ್ತು ಯೋಗ ಎಂಬಂತಹ ವಿಷಯಗಳನ್ನು ಒಳಗೊಂಡ ಸಣ್ಣ ಅವಧಿಯ ಕೋರ್ಸ್ ಗಳನ್ನು ಕೂಡ ವಿಶ್ವವಿದ್ಯಾಲಯ ಪ್ರಾರಂಭಿಸುವ ಸಾಧ್ಯತೆ ಇದೆ" ಎಂದು ಅವರು ತಿಳಿಸಿದ್ದಾರೆ.
ಶೈಕ್ಷಣಿಕವಾಗಿ ಇನ್ನಷ್ಟು ಉತ್ಕೃಷ್ಟತೆ ಪಡೆಯಲು ವಿಶ್ವವಿದ್ಯಾಲಯದಲ್ಲಿ ಇನ್ನಷ್ಟು ಶಾಲೆಗಳನ್ನು, ವಿಭಾಗಗಳನ್ನು ತೆರೆಯುವ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.
"ಭಾಷಾಶಾಸ್ತ್ರ ಮತ್ತು ಸಾಹಿತ್ಯದ ಶಾಲೆ ಹಾಗು ಅಂತರಾಷ್ಟ್ರಿಯ ಸಂಬಂಧಗಳು ಮತ್ತು ಶಾಂತಿ ಅಧ್ಯಯನ ಶಾಲೆ ನಮ್ಮ ಮುಂದಿನ ಗುರಿಯಾಗಲಿದೆ" ಎಂದು ಸಿಂಗ್ ಹೇಳಿದ್ದಾರೆ.