ಪ್ರಧಾನ ಸುದ್ದಿ

4 ಐಎಎಸ್ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ಮಥಾಯಿ ದೂರು

Lingaraj Badiger
ಬೆಂಗಳೂರು: ಈ ಹಿಂದೆ ಬಿಬಿಎಂಪಿ ಜಾಹೀರಾತು ಹಗರಣದ ಬಗ್ಗೆ ವರದಿ ನೀಡಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ, ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರು ಈಗ ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳು ಕಿರಿಯ ಕೆ.ಎ.ಎಸ್ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಐಎಎಸ್ ಅಧಿಕಾರಿಗಳಾದ ರಮಣ ರೆಡ್ಡಿ, ಡಾ. ಕಲ್ಪನಾ, ಡಾ. ಟಿ.ಕೆ. ಅನಿಲ್ ಕುಮಾರ್ ಹಾಗೂ ಲಕ್ಷ್ಮಿನಾರಾಯಣ ವಿರುದ್ಧ ಮಥಾಯಿ ಅವರು ಇಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ದೂರು ಸಲ್ಲಿಸಿದ್ದಾರೆ.
ರಾಜ್ಯದ ಕೆಲವು ಹಿರಿಯ ಅಧಿಕಾರಿಗಳು ಮಾಫಿಯಾದಲ್ಲಿ ತೊಡಗಿದ್ದಾರೆ. ಸರಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಐಎಎಸ್ ಅಧಿಕಾರಿಗಳ ವಿರುದ್ಧ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೂರು ದಾಖಲಾಗಿದೆ. ಇದರಿಂದ ಐಎಎಸ್ ವಲಯದಲ್ಲಿ ತಲ್ಲಣ ಆರಂಭವಾಗಿದೆ.
ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಥಾಯಿ, ನಾನು ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದಾಗ ೨ ಸಾವಿರ ಕೋಟಿ ರೂ. ಅಕ್ರಮ ಜಾಹೀರಾತು ದಂಧೆಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆ. ಇದಾದ ಬಳಿಕ ತನಗೆ ಕಿರುಕುಳ ಆರಂಭವಾಯಿತು. ವರದಿಯನ್ನು ಸರ್ಕಾರವೇ ಅಂಗೀಕರಿಸಿ ಸಿಐಡಿಗೆ ಒಪ್ಪಿಸಿ ತಮಗೆ ಅಭಿನಂದನೆ ಸಲ್ಲಿಸಿತ್ತು. ಆದರೆ ಅಧಿಕಾರಿಗಳು ಮಾತ್ರ ತನ್ನ ಸೇವಾ ವರದಿಯಲ್ಲಿ ‘ನಿಮ್ಮ ಸೇವೆ ತೃಪ್ತಿ ತಂದಿಲ್ಲ’ ಎಂದು ಬರೆದು ತನ್ನ ಮುಂದಿನ ಸೇವೆಗೆ ಹಾಗೂ ಬಡ್ತಿಗೆ ತೊಂದರೆ ಮಾಡಿದ್ದಾರೆ. ಅಲ್ಲಿಂದ ಸಕಾಲ ಯೋಜನೆ ಆಡಳಿತಾಧಿಕಾರಿಯಾಗಿ  ನೇಮಕಗೊಂಡ ಬಳಿಕವೂ ಕಿರುಕುಳ ಮುಂದುವರೆದಿದೆ. ಇಲ್ಲಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಕಲ್ಪನಾ ಅವರು, ದಿನನಿತ್ಯ ತಮಗೆ ಶೋಕಾಸ್ ನೋಟೀಸ್ ಜಾರಿ ಮಾಡಿ, ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಿನ್ನೆ ಬೆಳಿಗ್ಗೆ ೯.೪೫ಕ್ಕೆ ಕಚೇರಿಯಲ್ಲಿದ್ದರೂ ೧೧ ಗಂಟೆಗೆ ಆಗಮಿಸಿದ ಡಾ. ಕಲ್ಪನಾ ಅವರು, ಹಾಜರಾತಿ ಪುಸ್ತಕದಲ್ಲಿ ನಾನು ಗೈರು ಹಾಜರಾಗಿದ್ದೇನೆಂದು ನಮೂದಿಸಿದ್ದಾರೆ. ಇಂತಹ ಅನೇಕ ರೀತಿಯ ಕಿರುಕುಳ ಸಹಿಸಲಾಗದೆ, ಲೋಕಾಯುಕ್ತರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದರು.
ಸಿಎಂ ಭೇಟಿಗೂ ಅವಕಾಶ ನೀಡುತ್ತಿಲ್ಲ
ಬಿಬಿಎಂಪಿ ಜಾಹೀರಾತು ಹಗರಣದ ಬಗ್ಗೆ ವರದಿ ನೀಡಿದಾಗ ಸಾಕಷ್ಟು ಕಿರುಕುಳ ಅನುಭವಿಸಿದ್ದೆ. ಆಗಲೇ ಮುಖ್ಯಮಂತ್ರಿಯವರ ಭೇಟಿಗೆ ಅವಕಾಶ ಕೋರಿದ್ದೆ. ಆದರೆ ಹಿರಿಯ ಅಧಿಕಾರಿಗಳು ಅದಕ್ಕೆ ತಡೆವೊಡ್ಡಿದರು ಎಂದು ಕೆ. ಮಥಾಯಿ ಆರೋಪಿಸಿದರು.
ಇದೀಗ ಎರಡನೇ ಬಾರಿಯೂ ಮುಖ್ಯಮಂತ್ರಿಯವರ ಭೇಟಿಗೆ ಪ್ರಯತ್ನಿಸುತ್ತಿದ್ದೇನೆ. ಒಂದು ವೇಳೆ ಅವರ ಭೇಟಿಗೆ ಅವಕಾಶ ಲಭಿಸಿದರೆ, ಅವರು ನನಗೆ ನ್ಯಾಯ ದೊರಕಿಸಿಕೊಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. 
ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರು ದೂರು ಸ್ವೀಕರಿಸಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅವರ ಮೇಲೆ ನನಗೆ ವಿಶ್ವಾಸವಿದೆ ಎಂದು ಮಥಾಯಿ ತಿಳಿಸಿದ್ದಾರೆ.
SCROLL FOR NEXT