ನಾಸಿಕ್: ವಿಶ್ವದ ಅತ್ಯಂತ ಎತ್ತರದ ಜೈನ ವಿಗ್ರಹವೆಂಬ ಹೆಗ್ಗಳಿಕೆಗೆ ನಮ್ಮ ರಾಜ್ಯದಲ್ಲಿರುವ ಶ್ರವಣಬೆಳಗೊಳದ ಬಾಹುಬಲಿ ವಿಗ್ರಹ ಭಾಜನವಾಗಿತ್ತು. ಆದರೆ ಅದನ್ನೂ ಮೀರಿಸುವ ವಿಗ್ರಹ ಮಹಾರಾಷ್ಟ್ರ ರಾಜ್ಯದ ನಾಸಿಕ್ ನಲ್ಲಿ ಸಿದ್ಧವಾಗಿದೆ.
ನಾಸಿಕ್ ನಿಂದ 125 ಕಿಲೋ ಮೀಟರ್ ದೂರದಲ್ಲಿರುವ ಜೈನರ ಧಾರ್ಮಿಕ ಯಾತ್ರಾ ಸ್ಥಳ ಮಂಗಿತುಂಗಿಯಲ್ಲಿ 108 ಅಡಿ ಎತ್ತರದ ವೃಷಭದೇವ ವಿಗ್ರಹ ತಯಾರಾಗಿದೆ. ಇದು ವಿಶ್ವದ ಅತ್ಯಂತ ಎತ್ತರದ ಜೈನ ವಿಗ್ರಹ ಎಂದು ಗಿನ್ನೆಸ್ ದಾಖಲೆಗೆ ಪಾತ್ರವಾಗಿದೆ ಎಂದು ದೇವಾಲಯದ ಟ್ರಸ್ಟ್ ನ ಹೇಳಿಕೆ ತಿಳಿಸಿದೆ.
ವೃಷಭದೇವ, ಜೈನರ ಮೊದಲ ತೀರ್ಥಂಕರರಾಗಿದ್ದು, ಏಕಶಿಲೆಯಲ್ಲಿ ಅವರ ವಿಗ್ರಹವನ್ನು ಕೆತ್ತಲಾಗಿದೆ. ಈ ವಿಗ್ರಹ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಕಳೆದ ತಿಂಗಳೇ ನಡೆದಿದ್ದು, ಇದೀಗ ಗಿನ್ನೆಸ್ ಅಧಿಕಾರಿಗಳು ದಾಖಲೆಯ ಪತ್ರವನ್ನು ಹಸ್ತಾಂತರಿಸಿದ್ದಾರೆ.
ಈ ಸ್ಥಳಕ್ಕೆ ತೆರಳುವ ಯಾತ್ರಾರ್ಥಿಗಳಿಗಾಗಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ವಿಶೇಷ ಬಸ್ಸುಗಳನ್ನು ಏರ್ಪಾಡು ಮಾಡಿದೆ.