ಎಲೆಕ್ಟ್ರಿಕ್ ಕಾರು ತಯಾರಿಕಾ ಸಂಸ್ಥೆಯೂ ಆಗಿರುವ ಅಟೊಬೊಬೈಲ್ ಉತ್ಪಾದಕ ಮಹೇಂದ್ರ ಸಂಸ್ಥೆ ಚೀನಾದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧತೆ ನಡೆಸಿದೆ.
ಚೀನಾದ ಸ್ಥಳೀಯ ಸಂಸ್ಥೆಯೊಂದಿಗಿನ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಿ ಮಾರಾಟ ಮಾಡುವ ಯೋಜನೆ ಹೊಂದಿರುವ ಮಹೇಂದ್ರ ಸಂಸ್ಥೆ, ವಿಶ್ವದ ಅತಿ ದೊಡ್ಡ ಅಟೋಮೊಬೈಲ್ ಮಾರುಕಟ್ಟೆಗೆ ಪ್ರವೇಶಿಸಲು ಯತ್ನಿಸುತ್ತಿದೆ.
ಮಹೇಂದ್ರ ಸಂಸ್ಥೆ ಪ್ರಸ್ತುತ ಅಮೇರಿಕ ಹಾಗೂ ಭಾರತದಲ್ಲಿ ರೇವಾ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಎಲೆಕ್ಟ್ರಿಕ್ ಕಾರುಗಳನ್ನು ತಯಾರು ಮಾಡಿ ಮಾರಾಟ ಮಾಡಲು ಆಸಕ್ತಿ ವಹಿಸುವ ಇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಮಹೇಂದ್ರ ಸಂಸ್ಥೆ ಸಿದ್ಧವಿದೆ. ಸಹಭಾಗಿತ್ವದ ಸಂಸ್ಥೆಗಳೊಂದಿಗೆ ಮಹೇಂದ್ರ ಸಂಸ್ಥೆ ತಂತ್ರಜ್ಞಾನವನ್ನೂ ಹಂಚಿಕೆ ಮಾಡಿಕೊಳ್ಳಲಿದೆ ಎಂದು ಮಹೇಂದ್ರ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ್ ಮ್ಯಾಥ್ಯೂ ತಿಳಿಸಿದ್ದಾರೆ.
ಚೀನಾ ಮಾರುಕಟ್ಟೆಯಲ್ಲಿ ಮಹೇಂದ್ರ ಕಂಪನಿಯ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲು ಸಂಸ್ಥೆ ಉತ್ಸುಕವಾಗಿದ್ದು, ಈ ಬಗ್ಗೆ ಈಗಾಗಲೇ ಅಲ್ಲಿನ ಸ್ಥಳೀಯ ಸಂಸ್ಥೆಗಳೊಂದಿಗೂ ಮಾತುಕತೆ ನಡೆಸಲಾಗುತ್ತಿದೆ ಎಂದು ಅರವಿಂದ್ ಮ್ಯಾಥ್ಯೂ ಮಾಹಿತಿ ನೀಡಿದ್ದಾರೆ.