ರಾಜ್ಯದ ಜಲಪಾತಗಳಲ್ಲಿ ಮುಂಗಾರು ಮಳೆ ನರ್ತನ! 
ಪ್ರವಾಸ-ವಾಹನ

ರಾಜ್ಯದ ಜಲಪಾತಗಳಲ್ಲಿ ಮುಂಗಾರು ಮಳೆ ನರ್ತನ!

ಮುಂಗಾರು ಮಳೆಯ ಪ್ರಭಾವದಿಂದಾಗಿ ರಾಜ್ಯ ಕೆಲವೆಡೆ 2 ತಿಂಗಳುಗಳಲ್ಲೇ ಭರ್ಜರಿ ಮಳೆಯಾಗಿರುವುದರಿಂದ ಜಲಸಮೃದ್ಧಿ ಕಂಗೊಳಿಸುತ್ತಿದೆ. ನದಿ ತೊರೆಗಳಂತೂ ತುಂಬಿ ಹರಿಯುತ್ತಿರುವುದರಿಂದ ಪ್ರಮುಖ ಜಲಾಶಯ, ಕರೆತೊರೆಗಳೆಲ್ಲಾ ಅವಧಿಗೂ ಮುನ್ನವೇ ಭರ್ತಿಯಾಗಿದೆ...

ಬೆಂಗಳೂರು: ಮುಂಗಾರು ಮಳೆಯ ಪ್ರಭಾವದಿಂದಾಗಿ ರಾಜ್ಯ ಕೆಲವೆಡೆ 2 ತಿಂಗಳುಗಳಲ್ಲೇ ಭರ್ಜರಿ ಮಳೆಯಾಗಿರುವುದರಿಂದ ಜಲಸಮೃದ್ಧಿ ಕಂಗೊಳಿಸುತ್ತಿದೆ. ನದಿ ತೊರೆಗಳಂತೂ ತುಂಬಿ ಹರಿಯುತ್ತಿರುವುದರಿಂದ ಪ್ರಮುಖ ಜಲಾಶಯ, ಕರೆತೊರೆಗಳೆಲ್ಲಾ ಅವಧಿಗೂ ಮುನ್ನವೇ ಭರ್ತಿಯಾಗಿದೆ. 
ನಾಡಿನ ಜಲಪಾತಗಳೂ ಧುಮ್ಮುಕ್ಕಿ ಹರಿದು ಅಭೂತಪೂರ್ವ ಲೋಕವನ್ನೇ ಸೃಷ್ಟಿ ಮಾಡಿವೆ. ಈ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಜಲಪಾತಗಳಿಗೆ ಪ್ರವಾಸಿಗರ ಜನಸಾಗರವೇ ಹರಿದು ಬರುತ್ತಿದೆ. 
ಮಲೆನಾಡಂತೂ ಮಳೆನಾಡಾಗಿ ಹೋಗಿದೆ, ಮಲೆನಾಡಿನಲ್ಲಿ ಆಕಾಶಕ್ಕೆ ತೂತು ಬಿದ್ದಿದೆಯೇನೋ ಎಂಬಂತೆ ಒಂದೇ ಸಮನೆ ಮಳೆಯಾಗುತ್ತಿರುವುದರಿಂದ ಎಲ್ಲಾ ಜಲಪಾತಗಳೂ ಮೈದುಂಬಿ ಹರಿಯುತ್ತಿವೆ. 
ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಶರಾವತಿ ನದಿ ತುಂಬಿ ಹರಿಯುತ್ತಿದ್ದು, ಜನರ ಕಣ್ಮನವನ್ನು ಸೆಳೆಯುತ್ತಿದೆ. ಜೋಗ ಜಲಪಾತ ಶಿವಮೊಗ್ಗದಿಂದ ಕೊಂಚ ದೂರದಲ್ಲಿದ್ದು, ಸಾಗರ ತಾಲೂಕಿನ ತಾಳಗೊಪ್ಪದಿಂದ ಅಂದಾಜು 16 ಕಿ.ಮೀ ಕ್ರಮಿಸಬೇಕಾಗುತ್ತದೆ. 
ಮಂಡ್ಯ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗೆ ಕಟ್ಟಿರುವ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿರುವ ಹಿನ್ನಲೆಯಲ್ಲಿ ಕಳೆದೆರಡು ವಾರಗಳಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಶನಿವಾರ ಮತ್ತು ಭಾನುವಾರಗಳಂದು ಸುಮಾರು 30ರಿಂದ 40 ಸಾವಿರ ಪ್ರವಾಸಿಗರು ಭೇಟಿ ನೀಡಿ ಹೊರಹರಿವಿನ ನೀರಿನ ರಮಣೀಯತೆಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. 
ಕಬಿನಿ ಮತ್ತು ಕೃಷ್ಣರಾಜಸಾಗರ ಜಲಾಷಯದಿಂದ ಹರಿದುಬರಲಿರುವ 50ರಿಂದ 60 ಸಾವಿರ ಕ್ಯೂಸೆಕ್ ನೀರು ಶಿವನಸಮುದ್ರದ ಗಗನಚುಕ್ಕಿ ಮತ್ತು ಭರಚುಕ್ಕಿಯಲ್ಲಿ ಧುಮ್ಮಿಕ್ಕಿ ಹರಿಯುತ್ತಿರುವುದರಿಂದ ಅಲ್ಲಿ ಜನಜಂಗುಳಿ ಏರ್ಪಟ್ಟಿದೆ. 
ಇನ್ನು ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿ ಸಮೀಪ ಹೇಮಾವತಿ ಜಲಪಾತ ನೋಡಲು ಪ್ರವಾಸಿಗರು ವಾರಾಂತ್ಯದಲ್ಲಿ ಭೇಟಿ ನೀಡುತ್ತಿದ್ದು, ಲಕ್ಷ್ಮಣ ತೀರ್ಥ, ಕಾವೇರಿ ಮತ್ತು ಹೇಮಾವತಿ ನದಿಯ ಸಂಗಮಕ್ಷೇತ್ರವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹರಿದುಬರುತ್ತಿದ್ದಾರೆ. 
ಬೆಳಗಾವಿ
ಬೆಂಗಳೂರಿನಿಂದ 502 ಕಿಮೀ ದೂರದಲ್ಲಿರುವ ಬೆಳಗಾವಿ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿದ್ದು, ಹಲವು ಪ್ರೇಕ್ಷಣೀಯ ತಾಣಗಳನ್ನು ಹೊಂದಿದೆ. ಕರ್ನಾಟಕದ 2ನೇ ಅತೀ ದೊಡ್ಡ ಜಲಾಪಾತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗೋಕಾಕ್ ಜಲಾಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಗೋಕಾಕ್'ನಿಂದ 6 ಕಿ.ಮೀ ದೂರದಲ್ಲಿರುವ ಈ ಜಲಪಾತವು ಘಟಪ್ರಭ ನದಿಯಿಂದ ಉಂಟಾಗಿದೆ. 180 ಅಡಿಯಿಂದ ಧುಮ್ಮಿಕ್ಕುವ ನೀರು ಇಲ್ಲಿ ನಯನ ಮನೋಹರ ದೃಶ್ಯವನ್ನು ನಿರ್ಮಿಸಿದೆ. ಗಾಡ್ಚಿನ್ಮಿಕಿ, ಅಂಬೋಲಿ, ಸುರಾಲ್, ಕಂಕುಂಬಿ, ದೂದ್'ಸಾಗರ್ ಜಲಪಾತಗಳು ಕೂಡ ರಮಣೀಯರವಾಗಿ ಹರಿಯುತ್ತಿದ್ದು, ಪ್ರವಾಸಿಗರ ಕಣ್ಮನವನ್ನು ಸೆಳೆಯುತ್ತಿದೆ. 
ಕೊಡಗು
ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಜಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿರುವ ಪರಿಸರವನ್ನು ಕೊಡಗು ಹೊಂದಿದೆ. ಕೊಡಗಿನಲ್ಲಿ ಹಲವಾರು ರುದ್ರರಮಣೀಯ ಜಲಪಾತಗಳಿದ್ದು, ಇವುಗಳ ಪೈಕಿ ಅಬ್ಬಿ ಜಲಪಾತ ಕೂಡ ಒಂದಾಗಿದೆ. ಮಡಿಕೇರಿಗೆ ಸಮೀಪವಿರುವುದರಿಂದ ಪ್ರಮುಖ ಪ್ರವಾಸಿ ತಾಣವಾಗಿ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಮಡಿಕೇರಿಯಿಂದ ಸುಮಾರು 8 ಕಿಮೀ ದೂರದಲ್ಲಿರುವ ಅಬ್ಬಿ ಜಲಪಾತ ನಿಜಕ್ಕೂ ಒಂದು ಮೋಹಕ ಜಲಪಾತ. ಜಲಪಾತವನ್ನು ನೋಡಲು ಬಯಸುವವರು ಮಡಿಕೇರಿಯಿಂದ ಬಾಡಿಗೆಗೆ ಆಟೋ, ಜೀಪು ಅಥವಾ ಸ್ವಂತ ವಾಹನಗಳಲ್ಲಿ ತೆರಳಬಹುದಾಗಿದೆ. 
ಅಂಕುಡೊಂಕಾದ ರಸ್ತೆಯಲ್ಲಿ ಕಾಡು, ಕಾಫಿ, ಏಲಕ್ಕಿ ತೋಟದ ನಡುವೆ ಹೆಜ್ಜೆ ಹಾಕುತ್ತಾ ಮುನ್ನಡೆಯುತ್ತಿದ್ದರೆ ಸಾಗುವುದೇ ತಿಳಿಯುವುದಿಲ್ಲ. ಇನ್ನೇನು ಕೆಲವೇ ಕಿ.ಮೀ ಅಂತರದಲ್ಲಿ ಜಲಪಾತ ಇದೆ ಇನ್ನುವುದು ಭೋರ್ಗರೆಯುವ ಸದ್ದಿನಿಂದಲೇ ತಿಳಿಯುತ್ತದೆ. 
ದಕ್ಷಿಣ ಕನ್ನಡ 
ಮುಂಗಾರಿಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಚಾರ್ಮಾಡಿ ಘಾಟ್ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಎರ್ಮಾಯ್ ಜಲಪಾತವಂತೂ ಧುಮ್ಮುಕ್ಕಿ ಹರಿಯುತ್ತಿದ್ದು, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಂತೂ ಮರೆಯಲಾಗದ ಅನುಭವದಂತೆ ಭಾಸವಾಗುತ್ತದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT