ಬೆಂಗಳೂರು: ಗತಕಾಲದ ವೈಭವವನ್ನು ಮತ್ತೆ ಮರಳಿ ಪಡೆಯಲು ತುದಿಗಾಲಲ್ಲಿ ನಿಂತಿರುವ ಖ್ಯಾತ ಬೈಕ್ ತಯಾರಿಕಾ ಸಂಸ್ಥೆ ಜಾವಾ, ತನ್ನನೂತನ ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ನೂತನ ಮಾರ್ಗವನ್ನು ಆಯ್ದುಕೊಂಡಿದೆ.
ಪಡ್ಡೆ ಹುಡುಗರು, ಯುವಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಜಾವಾ ಬೈಕ್ ಇದೇ ನವೆಂಬರ್ 15ರಂದು ಹೊಸ ಅವತಾರದೊಂದಿಗೆ ಅನಾವರಣಗೊಳ್ಳುತ್ತಿದೆ. ಇನ್ನೇನು ಭಾರತದ ರಸ್ತೆಗಳಲ್ಲಿ ಅಬ್ಬರಿಸಲು ಸಿದ್ಧವಾಗಿರುವ ನೂತನ ಜಾವಾ ಬೈಕ್ನ ಪ್ರಚಾರದಲ್ಲಿ ನಿರತವಾಗಿರುವ ಮಹೀಂದ್ರಾ ಸಂಸ್ಥೆ, ತನ್ನ ಪ್ರಚಾರ ಕಾರ್ಯಕ್ಕೆ ನೂತನ ವಿಧಾನವನ್ನು ಅಳವಡಿಸಿಕೊಂಡಿದ್ದು, ಡಾ.ರಾಜ್ಕುಮಾರ್ ಅಭಿನಯದ ‘ನಾ ನಿನ್ನ ಮರೆಯಲಾರೆ’ ಚಿತ್ರದ ಸಾಹಸ ದೃಶ್ಯದೊಂದಿಗೆ ಬೈಕ್ನ ವೈಭವವನ್ನು ನೆನಪಿಸುವ ಕೆಲಸ ಮಾಡಿದೆ.
ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿಕೊಂಡಿರುವ ಮಹಿಂದ್ರಾ ಸಂಸ್ಥೆ, ತನ್ನ ಜಾವಾ ಮೋಟರ್ ಸೈಕಲ್ ಹೆಸರಿನ ಟ್ವಿಟರ್, ಫೇಸ್ಬುಕ್ ಮತ್ತು ಯ್ಯೂಟ್ಯೂಬ್ ಚಾನೆಲ್ಗಳಲ್ಲಿ ಈ ದೃಶ್ಯಗಳನ್ನು ಹಂಚಿಕೊಂಡಿದೆ.
'ನಾ ನಿನ್ನ ಮರೆಯಲಾರೆ' ಚಿತ್ರದಲ್ಲಿ ನಟ ರಾಜ್ ಕುಮಾರ್ ಅವರು ಬಳಸಿರುವುದು ಜಾವಾ ಬೈಕ್ ಅನ್ನೇ. ಅಲ್ಲದೆ, ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ರಾಜ್ ತಮ್ಮ ಜಾವಾ ಬೈಕ್ ಮೂಲಕ ರೈಲು ಬೆನ್ನು ಹತ್ತುತ್ತಾರೆ. ಬೆಟ್ಟಗುಡ್ಡಗಳು, ಕಾರು ಲಾರಿಗಳ ಮೇಲೆ ರಾಜ್ ಕುಮಾರ್ ಅವರು ಬೈಕ್ ಅನ್ನು ಚಲಾಯಿಸುತ್ತಾರೆ. ಈ ದೃಶ್ಯ ಸಾಹಸಮಯವಾಗಿ ಕೂಡಿದ್ದು, ಆ ದೃಶ್ಯ ಎಂಥವರನ್ನೂ ಹಿಡಿದಿಟ್ಟುಕೊಳ್ಳುವಷ್ಟು ರೋಚಕವಾಗಿದೆ. ಹೀಗಾಗಿ ಮಹೀಂದ್ರ ಸಂಸ್ಥೆ ತನ್ನ ನೂತನ ಬೈಕ್ನ ಪ್ರಚಾರಕ್ಕಾಗಿ ಮತ್ತು ಅದರ ಗತ ವೈಭವವನ್ನು ಸಾರುವ ಸಲುವಾಗಿ ರಾಜ್ ಕುಮಾರ್ ಅವರ ಚಿತ್ರದ ದೃಶ್ಯ ತುಣುಕನ್ನು ಬಳಸಿಕೊಂಡಿದೆ.
ತಿಂಗಳ ಹಿಂದೆ ಜಾವಾದ ಎಂಜಿನ್ ಮಾದರಿಯನ್ನು ಮಹೀಂದ್ರಾ ಸಂಸ್ಥೆ ಬಿಡುಗಡೆ ಮಾಡಿತ್ತು. ಈ ಹಿಂದಿನ ಬೈಕ್ ನ ಎಂಜಿನ್ ಮಾದರಿಯಲ್ಲೇ ನೂತನ ಬೈಕ್ ನ ಎಂಜಿನ್ ಅನ್ನೂ ಕೂಡ ವಿನ್ಯಾಸ ಮಾಡಿದ್ದರಿಂದ, ಹೊಸ ಬೈಕ್ ಬಗ್ಗೆ ಯುವ ಸಮುದಾಯದಲ್ಲಿ ಸಾಕಷ್ಟು ನಿರೀಕ್ಷೆಗಳು ಮನೆ ಮಾಡಿವೆ. ಈ ನಡುವೆ ನೂತನ ಜಾವಾದ ಪರೀಕ್ಷಾರ್ಥ ಬೈಕ್ ಗಳು ಅಲ್ಲಲ್ಲಿ ಕಾಣಿಸಿಕೊಂಡಿದೆ. ಆದರೂ, ಇದೇ ನವೆಂಬರ್ 15ರಂದು ಬೈಕ್ನ ಮೂರು ಅವತರಣಿಕೆಗಳು ಅಧಿಕೃತವಾಗಿ ಬಿಡುಗಡೆಯಾಗುತ್ತಿದ್ದು, ಬೈಕ್ನ ಕುರಿತ ಕುತೂಹಲ ಇನ್ನೂ ಹಾಗೇ ಉಳಿದುಕೊಂಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos