ಪಣಜಿ: ಗೋವಾ ಪ್ರವಾಸ ಮಾಡ ಹೊರಟಿರುವ ಪ್ರವಾಸಿಗರೂ ಮತ್ತು ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಇದ್ದು, ಇನ್ನು ಮುಂದೆ ಗೋವಾದಿಂದ ಹೆಚ್ಚು ಮದ್ಯದ ಬಾಟಲಿಗಳನ್ನು ಮನೆಗೊಯ್ಯಲು ಅಲ್ಲಿನ ಸರ್ಕಾರ ಅವಕಾಶ ನೀಡಿದೆ.
ಅಚ್ಚರಿ ಪಡಬೇಡಿ ಇದು ನಿಜ.... ಹೌದು.. ಗೋವಾ ಪ್ರವಾಸಕ್ಕೆ ಹೋಗುವ ಮದ್ಯಪ್ರಿಯರಿಗೆ ಅಲ್ಲಿನ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಇನ್ನು ಮುಂದೆ ಪ್ರವಾಸ ಮುಗಿಸಿ ಮನೆಗೆ ಮರಳುವ ಇತರೆ ರಾಜ್ಯಗಳ ಪ್ರವಾಸಿಗರು ಹೆಚ್ಚುವರಿ ಮದ್ಯದ ಬಾಟಲಿಗಳನ್ನು ಮನೆಗೆ ಕೊಂಡೊಯ್ಯಬಹುದು.
ಆದಾಯ ಕೊರತೆಯಿಂದ ಕಂಗೆಟ್ಟಿರುವ ಗೋವಾ ಸರ್ಕಾರ ಇಂತಹುದೊಂದು ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಶೀಘ್ರದಲ್ಲಿಯೇ ಈ ಕುರಿತಂತೆ ನಿರ್ಣಯ ಕೈಗೊಳ್ಳಲಿದೆ. ಆ ಮೂಲಕ ಕದ್ದು ಮುಚ್ಚಿ ಹೆಚ್ಚಿನ ಮದ್ಯದ ಬಾಟೆಲ್ ಗಳನ್ನು ಗಡಿ ದಾಟಿಸುವ ಮದ್ಯ ಪ್ರಿಯರು ಇನ್ನು ಮುಂದೆ ರಾಜಾರೋಷವಾಗಿಯೇ ಅಧಿಕೃತವಾಗಿಯೇ ಎರಡಕ್ಕಿಂತಲೂ ಹೆಚ್ಚಿನ ಮದ್ಯದ ಬಾಟೆಲ್‌ಗಳನ್ನು ಇತರೆ ರಾಜ್ಯಗಳಿಗೆ ಕೊಂಡೊಯ್ಯಬಹುದಾಗಿದೆ.
ಇಲ್ಲಿಯ ವರೆಗೂ ಗೋವಾದಲ್ಲಿ ಮಾರುವ ಮದ್ಯವನ್ನು ಡಿಯು ಮತ್ತು ಡಮನ್ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಟ್ಟರೆ ಬೇರೆ ರಾಜ್ಯಗಳಿಗೆ ಸಾಗಿಸುವಂತಿರಲಿಲ್ಲ. ಆದರೆ, ಪ್ರಸ್ತುತ ಕಾನೂನು ಎಷ್ಟೇ ಬಿಗಿಯಾಗಿದ್ದರೂ ಕೆಲವು ಪ್ರವಾಸಿಗರು ಚೆಕ್ ಪೋಸ್ಟ್‌ಗಳಲ್ಲಿ ಲಂಚ ನೀಡಿಯಾದರೂ, ಹೆಚ್ಚಿನ ಮದ್ಯವನ್ನು ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾರೆ. ಇಂತಹ ಪ್ರವಾಸಿಗರಿಂದ ಆಗುವ ಲಾಭವನ್ನು ತಾನೇ ಪಡೆಯಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಈ ಬಗ್ಗೆ ಗೋವಾ ವಿಧಾನಸಭೆಯಲ್ಲಿ ಮಾತನಾಡಿರುವ ಸಿಎಂ ಪ್ರಮೋದ್ ಸಾವಂತ್ ಅವರು, ಗೋವಾದಿಂದ ಅನಧಿಕೃತವಾಗಿ ಚೆಕ್ ಪೋಸ್ಟ್ ಗಳಲ್ಲಿ ಅಧಿಕಾರಿಗಳಿಗೆ ಲಂಚ ನೀಡಿ ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿದೆ. ಪ್ರಮುಖವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಹೆಚ್ಚಿನ ಪ್ರಮಾಣದ ಮದ್ಯ ರವಾನೆಯಾಗುತ್ತಿದೆ. ಆದರೆ ಇದರಿಂದ ಸರ್ಕಾರಕ್ಕೆ ಯಾವುದೇ ರೀತಿಯ ಲಾಭವಾಗುತ್ತಿಲ್ಲ. ಆದರ ಬದಲಿಗೆ ನಾವೇ ಅನುಮತಿ ನೀಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಹಣ ಬರುವಂತೆ ಮಾಡಬಹುದು. ಅಂತೆಯೇ ಗೋವಾ ಮದ್ಯವನ್ನೂ ಈ ಮೂಲಕ ಪ್ರಚುರ ಪಡಿಸಿದಂತಾಗುತ್ತದೆ. ನಮ್ಮ ಆದಾಯದ ಮೂಲ ಕೂಡ ಹೆಚ್ಚಳವಾಗುತ್ತದೆ. ಈ ಬಗ್ಗೆ ತಾವು ನೆರೆಯ ರಾಜ್ಯಗಳ ಸರ್ಕಾರದೊಂದಿಗೆ ಚರ್ಚೆ ಮಾಡಲು ಸಿದ್ಧ ಎಂದು ಹೇಳಿದರು.
ಪ್ರಸ್ತುತ ಗೋವಾದಿಂದ ವಿಮಾನದಲ್ಲಿ ವಾಪಸಾಗುವ ಪ್ರವಾಸಿಗರಿಗೆ ವಿಮಾನದಲ್ಲಿ ಮಾತ್ರ ಎರಡು (750 ಎಂಎಲ್ ನ) 'ಐಎಂಎಲ್‌ಎಫ್' (ಭಾರತದಲ್ಲಿ ತಯಾರಾದ ವಿದೇಶಿ ಮದ್ಯ) ಬಾಟೆಲ್ ಗಳನ್ನು ಕೊಂಡೊಯ್ಯಲು ಅವಕಾಶವಿದೆ. ಆದರೆ ರಸ್ತೆ ಮಾರ್ಗದ ಮೂಲಕ ಮದ್ಯ ಕೊಂಡೊಯ್ಯಲು ಅವಕಾಶವಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos