ಪ್ರವಾಸ-ವಾಹನ

ದೂದ್ ಸಾಗರ ಜಲಪಾತ ಬಳಿ ರೈಲು ನಿಲುಗಡೆಗೆ ಅವಕಾಶ; ಪ್ರವಾಸಿಗರಿಗೆ ಅನುಕೂಲ

Sumana Upadhyaya

ಬೆಳಗಾವಿ: ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಹಸಿರು ಸಿರಿಯಿಂದ ಕಂಗೊಳಿಸುವ ಪಶ್ಚಿಮ ಘಟ್ಟದಲ್ಲಿರುವ ದೂದ್ ಸಾಗರ ಜಲಪಾತಕ್ಕೆ ಪ್ರವಾಸೋದ್ಯಮ ಇಲಾಖೆ ಇನ್ನಷ್ಟು ಮೆರುಗು ನೀಡಲು ಮುಂದಾಗಿದೆ. 


ಬೆಳಗಾವಿ-ವಾಸ್ಕೊ ರೈಲಿಗೆ ದೂದ್ ಸಾಗರ ಜಲಪಾತ ಹತ್ತಿರ ದೂದ್ ಸಾಗರ್ ನಿಲ್ದಾಣದಲ್ಲಿ ನಿಲುಗಡೆ ಮಾಡಿ ಆ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ಉದ್ದೇಶವಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ.


ದೇಶದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾಗಿರುವ ದೂದ್ ಸಾಗರ ಜಲಪಾತ ಬೆಳಗಾವಿಯಿಂದ 80 ಕಿಲೋ ಮೀಟರ್ ದೂರದಲ್ಲಿದೆ. ಇದರ ಎತ್ತರ 300 ಮೀಟರ್. ವಾರಕ್ಕೆ ಎರಡು ಬಾರಿ ರೈಲನ್ನು 10 ದಿನಗಳ ಕಾಲ ನಿಲುಗಡೆ ಮಾಡಿ ಪ್ರಯೋಗ ಮಾಡಿ ನೋಡಲು ನೈರುತ್ಯ ರೈಲ್ವೆ ಸದ್ಯಕ್ಕೆ ನಿರ್ಧರಿಸಿದೆ. ಈ ಮೂಲಕ ಹೆಚ್ಚೆಚ್ಚು ಪ್ರವಾಸಿಗರನ್ನು ಸೆಳೆಯುವುದು ಸರ್ಕಾರದ ಗುರಿಯಾಗಿದೆ.


ದೂದ್ ಸಾಗರ ಜಲಪಾತ ಅದ್ಭುತ ರಮಣೀಯ ಸ್ಥಳವಾದರೂ ಹಲವು ವರ್ಷಗಳವರೆಗೆ ಇದನ್ನು ನಿರ್ಲಕ್ಷ್ಯ ಮಾಡಲಾಗಿತ್ತು. ಕುಟುಂಬದವರ ಜತೆ ಹೋಗಲು ದೂದ್ ಸಾಗರ ಉತ್ತಮ ಸ್ಥಳ, ಇದು ಒಂದು ಅಭಿವೃದ್ಧಿ ದೇಶದಲ್ಲಿ ಇರುತ್ತಿದ್ದರೆ ವಿಶ್ವವಿಖ್ಯಾತ ಪ್ರವಾಸಿ ಸ್ಥಳವಾಗಿ ಇದರಿಂದ ಪ್ರವಾಸೋದ್ಯಮ ಇಲಾಖೆಗೆ ಸಾಕಷ್ಟು ಆದಾಯ ಬರುತ್ತಿತ್ತು. ಇದೇ ರೀತಿ ನಮ್ಮಲ್ಲಿ ಕೂಡ ಮಾಡಲು ಬೆಳಗಾವಿ-ವಾಸ್ಕೊ-ಬೆಳಗಾವಿ ರೈಲನ್ನು ವಾರಕ್ಕೆ ಎರಡು ಬಾರಿ ಇಲ್ಲಿ ನಿಲುಗಡೆ ಮಾಡಲಾಗುತ್ತದೆ. ಅದು ಇಂದಿನಿಂದ ಆರಂಭವಾಗಲಿದೆ ರೈಲ್ವೆ ಇಲಾಖೆ ಮೂಲಕ ಈ ಸ್ಥಳವನ್ನು ಇನ್ನಷ್ಟು ಪ್ರವಾಸಿ ಸ್ನೇಹಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸದ ಸುರೇಶ್ ಅಂಗಡಿ ತಿಳಿಸಿದರು.


ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ 2016ರಿಂದ ನೈರುತ್ಯ ರೈಲ್ವೆ ದೂದ್ ಸಾಗರ ನಿಲ್ದಾಣದಲ್ಲಿ ನಿಲ್ಲುತ್ತಿರಲಿಲ್ಲ. ಪ್ರವಾಸಿಗರಿಗೆ ಅಷ್ಟು ಸುರಕ್ಷಿತ ಸ್ಥಳವಲ್ಲ ಎಂಬ ಮನೋಭಾವನೆಯಿತ್ತು. ಇನ್ನು ಸ್ಥಳ ಕೂಡ ಪ್ಲಾಸ್ಟಿಕ್ ಮತ್ತು ಬಾಟಲ್ ಗಳಿಂದ ಮಾಲಿನ್ಯವಾಗಿ ಹೋಗಿತ್ತು. ಈ ಬಗ್ಗೆ ರೈಲ್ವೆ ಇಲಾಖೆ ಮುಂದಿನ ದಿನಗಳಲ್ಲಿ ಗಮನ ಹರಿಸಲಿದೆ ಎಂದರು. 


ಜಲಪಾತದ ಪ್ರವೇಶ ಪ್ರದೇಶವನ್ನು ಅರಣ್ಯ ಇಲಾಖೆ ಮತ್ತು ಸ್ಥಳೀಯ ಪೊಲೀಸರು ನೋಡಿಕೊಳ್ಳುತ್ತಾರೆ.

SCROLL FOR NEXT