ಮಗಳೊಂದಿಗೆ ಪ್ರಿಯಾ ಸೆಮ್ವಾಲ್
ಇದು ಪತಿಯ ಮೇಲಿನ ಪ್ರೀತಿಯ ಕಥೆಯಷ್ಟೇ ಅಲ್ಲ ದೇಶಪ್ರೇಮದ ಕಥೆಯೂ ಹೌದು.
2012ರಲ್ಲಿ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ನುಸುಳುಕೋರರ ವಿರುದ್ಧ ನಡೆದ ಸೇನಾ ಕಾರ್ಯಾಚರಣೆಯಲ್ಲಿ 14 ರಜಪೂತ್ ರೆಜಿಮೆಂಟ್‌ನ ನಾಯಿಕ್ ಅಮಿತ್ ಶರ್ಮಾ ಹುತಾತ್ಮರಾಗಿದ್ದರು. 2 ವರುಷ ಕಳೆದ ನಂತರ ಶರ್ಮಾರ ಪತ್ನಿ ಪ್ರಿಯಾ ಸೆಮ್ವಾಲ್ ಸೇನೆಗೆ ಸೇರುವ ಮೂಲಕ ದಿಟ್ಟತನವನ್ನು ಮೆರೆದರು.
2014ರಲ್ಲಿ ಪ್ರಿಯಾ ಸೇನೆಗೆ ಸೇರಿದಾಗ ಅವರ ವಯಸ್ಸು 26. 4 ವರ್ಷ ಹರೆಯದ ಮಗಳು ಕ್ವಾಯಿಶ್ ಶರ್ಮಾಳನ್ನು ಅಜ್ಜಿ ಮನೆಯಲ್ಲಿ ಬಿಟ್ಟು ಪ್ರಿಯಾ ಸೇನಾ ತರಬೇತಿ ಪೂರೈಸಿದ್ದಳು.
2006ರಲ್ಲಿ ಅಮಿತ್ ಶರ್ಮಾನನ್ನು ಮದುವೆಯಾದಾಗ ಪ್ರಿಯಾಳ ಕಾಲೇಜು ವಿದ್ಯಾಭ್ಯಾಸ ಇನ್ನೂ ಮುಗಿದಿರಲಿಲ್ಲ. ಮದುವೆಯಾದ ನಂತರ ವಿದ್ಯಾಭ್ಯಾಸ ಮುಂದುವರಿಸುವಂತೆ ಅಮಿತ್ ಪ್ರೋತ್ಸಾಹ ನೀಡಿದ್ದು ಪ್ರಿಯಾ ಸ್ನಾತಕೋತ್ತರ ಪದವಿ ಪಡೆದಿದ್ದಳು.
ಆದರೆ 2012ರಲ್ಲಿ ಪತಿ ಹುತಾತ್ಮನಾದ ನಂತರ ಪ್ರಿಯಾ ತಾನೂ ಸೇನೆಗೆ ಸೇರುವುದಾಗಿ ತೀರ್ಮಾನಿಸಿದಳು. ಸಾಮಾನ್ಯವಾಗಿ ಪತಿಯ ಮರಣದ ನಂತರ ಪತ್ನಿಗೆ ಸೇನೆಯ ಕಚೇರಿಯಲ್ಲಿ ಯಾವುದಾದರೂ ಕೆಲಸವನ್ನು ನೀಡಲಾಗುತ್ತದೆ. ಆದರೆ ಪ್ರಿಯಾ ಸೇನೆಯಲ್ಲಿಯೇ ಕಾರ್ಯ ನಿರ್ವಹಿಸಲು ಸಿದ್ಧಳಾಗಿದ್ದಳು. 2014ರಲ್ಲಿ ಈಕೆ ಇಲೆಕ್ಟ್ರಿಕಲ್ ಆ್ಯಂಡ್ ಮೆಕ್ಯಾನಿಕಲ್ ಇಂಜಿನಿಯರಿಂಗ್ (ಇಎಂಇ) ವಿಭಾಗಕ್ಕೆ ಸೇರುವ ಮೂಲಕ ಪ್ರಿಯಾ ಭಾರತೀಯ ಸೇನೆಯಲ್ಲಿ ಹೊಸತೊಂದು ದಾಖಲೆಯನ್ನೇ ನಿರ್ಮಿಸಿದಳು.
ಅಷ್ಟೇ ಅಲ್ಲ ತನ್ನ ಮಗಳನ್ನೂ ಸೇನೆಗೆ ಸೇರಿಸಬೇಕೆಂಬ ಆಸೆ ಪ್ರಿಯಾಳದ್ದು. ಪ್ರಿಯಾಳಂತ ಹೆಣ್ಣು ಮಗಳು ಇಡೀ ದೇಶಕ್ಕೆ ಮಾದರಿ. ಆಕೆಯ ಧೈರ್ಯ ಮತ್ತು ದೃಢ ಸಂಕಲ್ಪಕ್ಕೆ ಹ್ಯಾಟ್ಸ್ ಆಫ್...