ಪ್ರೀತ್ಸೇ ಪ್ರೀತ್ಸೇ.. ಕಣ್ಣು ಮುಚ್ಚಿ ನನ್ನ ಪ್ರೀತ್ಸೇ...ಮನಸು ಬಿಚ್ಚಿ ನನ್ನ ಪ್ರೀತ್ಸೆ... ಎಂದು ಯಾರೂ ಈಗ ಹಾಡುತ್ತಾ ಪ್ರೀತಿಸುವುದಿಲ್ಲ. ಕಾಲ ಬದಲಾದಂತೆ ಪ್ರೀತಿ ಮಾಡುವ ರೀತಿಯೂ ಬದಲಾಗುತ್ತದೆ. ಒಂದು ಕಾಲದಲ್ಲಿ ಪ್ರಿಯತಮೆಯ ಕುಡಿನೋಟಕ್ಕೆ ಹಂಬಲಿಸುತ್ತಿದ್ದ ಹುಡುಗ ಇರುತ್ತಿದ್ದ. ಪ್ರಿಯಕರನ ಪತ್ರವನ್ನು ಕದ್ದು ಮುಚ್ಚಿ ಓದಿ ಸಂಭ್ರಮಿಸುವ ಹುಡುಗಿ ಇರುತ್ತಿದ್ದಳು. ಆದರೆ ಈಗ ಎಲ್ಲವೂ ಸೂಪರ್‌ಫಾಸ್ಟ್. ಪ್ರೀತಿಯ ಅಕ್ಷರಗಳೆಲ್ಲವೂ ಹೃಸ್ವಾಕ್ಷರಗಳಾಗಿ, emoticonಗಳಾಗಿ ಬದಲಾಗಿವೆ. ಪ್ರೀತಿ ಹುಟ್ಟಿಸುವ ಪುಳಕ, ವಿರಹದ ವೇದನೆಗಳೆಲ್ಲಾ ಸ್ಟೇಟಸ್‌ಗಳಾಗಿ, Life quotes ಆಗಿ ಸಾಮಾಜಿಕ ತಾಣದಲ್ಲಿ ಲೈಕು ಗಿಟ್ಟಿಸುತ್ತವೆ.
ಹಾಗಾದರೆ ಪ್ರೀತಿ ಎಂಬುದು ತನ್ನ ರಮ್ಯತೆಯನ್ನು ಕಳೆದುಕೊಂಡಿದೆಯೇ? ಇಲ್ಲ!
ಪ್ರೀತಿ ಬದಲಾಗಿಲ್ಲ, ಬದಲಾಗಿರುವುದು ನಾವು! ಪ್ರೀತಿಯನ್ನು ಆಸ್ವಾದಿಸುವ ಅದರ ಅನುಭೂತಿಯನ್ನು ಅನುಭವಿಸುವ, ಗ್ರಹಿಸುವ ರೀತಿಗಳು ಕಾಲಕ್ರಮೇಣ ಬದಲಾಗುತ್ತಾ ಹೋಗಿದೆ.
ಪ್ರೀತಿ ಎಂಬುದು ಯಾವತ್ತೂ ಪ್ರದರ್ಶನದ ವಸ್ತು ಅಲ್ಲವೇ ಅಲ್ಲ. ಅದು ನಮ್ಮೊಳಗಿನ ಅಂತಃಸತ್ವ. ಜೀವನದ ಒಂದೊಂದು ಮಜಲಿನಲ್ಲಿ ಪ್ರೀತಿ ಎಂಬುದು ನಮ್ಮ ಶಕ್ತಿಯೂ ನಮ್ಮ ದೌರ್ಬಲ್ಯವೂ ಆಗಬಹುದು! ಹಲವಾರು ಹುಡುಗ/ಹುಡುಗಿಯನ್ನು ಪ್ರೀತಿಸಿ ತನಗೆ ನಿಜವಾದ ಪ್ರೀತಿ ಇಲ್ಲಿವರೆಗೆ ದಕ್ಕಲೇ ಇಲ್ಲ ಎಂದು ಗೊಣಗಾಡುವವರು ಸ್ವಲ್ಪ ಕೇಳಿ...ಒಬ್ಬರನ್ನೇ ವಿಧವಿಧವಾಗಿ ಪ್ರೀತಿಸಿ..ನಿಜವಾದ ಪ್ರೀತಿ ಏನೆಂಬುದು ನಿಮಗೆ ಗೊತ್ತಾಗುತ್ತದೆ.
ಹಾಗಾದರೆ ಪ್ರೀತಿಸುವುದು ಹೇಗೆ?
ಪ್ರೀತಿ ಎಂಬುದು ಉಸಿರಾಟದಷ್ಟೇ ಸಹಜ ಕ್ರಿಯೆ
ಡೋಂಟ್ ಫಾಲ್ ಇನ್ ಲವ್, ರೈಸ್ ಇನ್ ಲವ್ ಅಂತಾರೆ ಲೇಖಕಿ ಪ್ರತಿಭಾ ರೇ. ಪ್ರೀತಿಯಲ್ಲಿ ಬೀಳುವುದಕ್ಕಿಂತ ಪ್ರೀತಿಯನ್ನೇ ಊರುಗೋಲಾಗಿ ಹಿಡಿದು ಮೇಲೇಳಬೇಕು. ಪ್ರೀತಿ ಯಾರಲ್ಲಿ, ಯಾವಾಗ ಎಲ್ಲಿ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ. ಆದರೆ ಪ್ರೀತಿ ಹುಟ್ಟಿದ ಮೇಲೆ ಅದನ್ನು ಕಾಪಾಡಿಕೊಂಡು ಬನ್ನಿ. ಪ್ರೀತಿ ಮಾಡಿದರೆ ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂಬೆಲ್ಲಾ ಫಿಲ್ಮೀ ಕಲ್ಪನೆಗಳಿಗೆ ಬ್ರೇಕ್ ಹಾಕಿ ಸಹಜ ರೀತಿಯಲ್ಲೇ ಪ್ರೀತಿಸಿ. ಪ್ರೀತಿ ಉಸಿರಾಟದಷ್ಟೇ ಸಹಜ ಹಾಗೂ ನಿರಂತರವಾಗಿರಲಿ.
ಇನ್ನೊಬ್ಬರನ್ನು ಪ್ರೀತಿಸುವ ಮುನ್ನ ಸ್ವತಃ ಪ್ರೀತಿಸಿ
ನೀವು ಯಾರನ್ನಾದರೂ ಪ್ರೀತಿಸಿದರೆ ಆ ವ್ಯಕ್ತಿಯ ಮನಸ್ಸನ್ನು ಮಾತ್ರವಲ್ಲ ಅವರ ಸ್ವಭಾವವನ್ನೂ ಪ್ರೀತಿಸತೊಡಗುತ್ತೀರಿ. ಆ ವ್ಯಕ್ತಿಯಲ್ಲಿ ಒಳ್ಳೆಯ ಹಾಗೂ ಕೆಟ್ಟ ಗುಣ ಎರಡೂ ಇರುತ್ತವೆ. ಒಳ್ಳೆಯ ಗುಣಗಳನ್ನು ಮೆಚ್ಚುತ್ತಲೇ ಕೆಟ್ಟ ಗುಣಗಳನ್ನು ತಿದ್ದಲು ನೋಡಿ. ಆ ವ್ಯಕ್ತಿ ನಿಮ್ಮೊಂದಿಗೆ ಹೇಗೆ ಇರುತ್ತಾನೆ ಎಂಬುದು ಮುಖ್ಯವಾಗಿದ್ದರೂ ತಪ್ಪುಗಳು ಕಂಡು ಬಂದಲ್ಲಿ ತಿದ್ದಿ ಹೇಳಿ. ವೈರುಧ್ಯಗಳನ್ನು ಗೌರವಿಸುತ್ತಾ ಜತೆಯಾಗಿರಿ.
ಪ್ರೀತಿ ಎಂಬುದು passion ಆಗಲಿ
ಮೈಕ್ರೋಸಾಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ರವೀಂದ್ರ ಸಿಂಗ್ ಎಂಬಾತ ಬರವಣಿಗೆಯನ್ನು ನೆಚ್ಚಿಕೊಂಡು ಪುಸ್ತಕಗಳನ್ನು ಬರೆದ. ಆತ ಬರೆದ ಐ ಟೂ ಹ್ಯಾಡ್ ಎ ಲವ್ ಸ್ಟೋರಿ ಮಾರುಕಟ್ಟೆಯಲ್ಲಿ ಹಿಟ್ ಆಯ್ತು. ಅವನು ಬರೆದ ಪ್ರೇಮಕತೆಗಳು ಪ್ರತಿಯೊಬ್ಬರ ಹೃದಯಕ್ಕೆ ಹತ್ತಿರವಾಗುತ್ತಾ ಹೋಯಿತು. ಆತ ಬರೆದ ಪುಸ್ತಕಗಳ ಕಥಾವಸ್ತು ಪ್ರೇಮವೊಂದೇ. ಬರವಣಿಗೆಯತ್ತ ಆತನಿಗಿರುವ ಪ್ರೀತಿ ಮತ್ತು ಪ್ರೀತಿಯ ಬಗ್ಗೆ ಆತನು ಕಟ್ಟಿಕೊಡುವ ರೀತಿಯೇ ಆತನ ಶಕ್ತಿ. ಇಲ್ಲಿ ಗೆದ್ದದ್ದು ಪ್ರೇಮ! ಯಾವುದೇ ಕೆಲಸ ಮಾಡುವಾಗ ಆ ಕೆಲಸದತ್ತ ನಮಗೆ ಪ್ಯಾಷನ್ ಇರಬೇಕು ಎಂದು ಹೇಳಲ್ವಾ...ಪ್ರೀತಿಯೂ ಹಾಗೆಯೇ..ಯಾರೂ ನಮ್ಮಂತೆ ಪ್ರೀತಿ ಮಾಡುವವರಿಲ್ಲ ಎಂದು ಕೊಂಡೇ ಪ್ರೀತಿಸುತ್ತಾ ಹೋಗಬೇಕು..
ಚೌಕಟ್ಟುಗಳನ್ನು ಮೀರಿದ ಪ್ರೀತಿ
ಪ್ರೀತಿಗೆ ಭಾಷೆಗಳ, ಜಾತಿ ಮತಗಳ ಹಂಗಿಲ್ಲ. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ. ಬೆಳೆಯುತ್ತಾ ಹೋದಂತೆ ಬದಲಾವಣೆಗಳು ಸಹಜ. ಪರಿಸ್ಥಿತಿ, ಸಮಾಜದ ಚೌಕಟ್ಟುಗಳಲ್ಲಿ ಪ್ರೀತಿ ಉಸಿರುಗಟ್ಟಿ ಹೋಗುವುದೂ ಉಂಟು. ಆದರೆ ಅದೇ ಪ್ರೀತಿ ಪ್ರಾಣವಾಯುವೂ ಆಗಬಹುದು. ಎರಡು ಹೈಡ್ರಜನ್ ಅಣು ಮತ್ತು ಎರಡು ಆಕ್ಸಿಜನ್ ಅಣುಗಳು ಸೇರಿದರೆ ಹೈಡ್ರಾಜನ್ ಪೆರಾಕ್ಸೈಡ್ (H2O2)ಆಗಿ ಬಿಡುತ್ತದೆ. ಆದರೆ ಈ bonding ನಲ್ಲಿ ಒಂದು ಆಕ್ಸಿಜನ್ ಅಣು ಕಡಿಮೆಯಾದರೆ ಅಲ್ಲಿ H2O -ನೀರು ಆಗಿ ಬಿಡುತ್ತದೆ. ಯಾವ ಸಂಬಂಧವನ್ನು ಬಿಡಬೇಕು, ಯಾವುದನ್ನು ಉಳಿಸಿಕೊಳ್ಳಬೇಕು ಎಂಬುದು ನಿಮಗೆ ಬಿಟ್ಟದ್ದು. ಕೆಲವೊಂದು ಸಂಬಂಧಗಳನ್ನು ಉಳಿಸಿಕೊಳ್ಳುವುದಕ್ಕೆ ತ್ಯಾಗವನ್ನೂ ಮಾಡಬೇಕಾಗುತ್ತದೆ. ಆ ತ್ಯಾಗದ ಗುಣ ನಿಮ್ಮಲ್ಲಿರಲಿ.
ಪ್ರೀತಿಸುವುದೆಂದರೆ ಸದಾ ಅಂಟಿಕೊಂಡೇ ಇರುವುದಲ್ಲ. ಅಲ್ಲಿ ಸ್ವಲ್ಪ ಅಂತರವೂ ಮುಖ್ಯ. ಇಬ್ಬರ ಸಂಬಂಧದಲ್ಲಿಯೂ ಬ್ರೀಥಿಂಗ್ ಸ್ಪೇಸ್ ಇರಲಿ. ಇಲ್ಲವಾದಲ್ಲಿ ಪ್ರೀತಿಯೂ ಉಸಿರುಗಟ್ಟಿ ಸತ್ತು ಹೋಗುತ್ತದೆ.
ಪ್ರೀತಿಯಲ್ಲಿ ಬ್ರೇಕಪ್ ಸಹಜ. ಒಂದು ಕಾಲದಲ್ಲಿ ನೀನೇ ನನ್ನ ಪ್ರಾಣ ಅಂತಿದ್ದವರು ಬ್ರೇಕಪ್ ಆದ ಕೂಡಲೇ ಬದ್ಧ ವೈರಿಗಳಾಗುತ್ತಾರೆ. ಇಂತಿರ್ಪ, ಬ್ರೇಕಪ್‌ಗೆ ಕಾರಣಗಳೇನು? ಈ ಪ್ರಶ್ನೆಯನ್ನು ನೋಡಿದ ಕೂಡಲೇ ಹಲವು ಉತ್ತರಗಳು ನಿಮ್ಮ ಮನಸ್ಸಲ್ಲಿ ಮೂಡಿರಬಹುದು. ಅದನ್ನೆಲ್ಲಾ ಪಕ್ಕಕ್ಕಿಡಿ. ಬ್ರೇಕಪ್‌ಗೆ ಕಾರಣ ಅದ್ಯಾವುದೂ ಅಲ್ಲ..ಮತ್ತೇನು ಅಂತೀರಾ?
ಹೌದು ಕೋಪ, ಸಂದೇಹ, ಹಪಾಹಪಿ, ಅತಿ ಆಸೆ ಎಲ್ಲವೂ ಮನುಷ್ಯನ ಸಹಜ ಗುಣಗಳೇ ಆಗಿದ್ದರೂ ಅದು ಪ್ರೀತಿಯ ಮೇಲೆ ಓವರ್‌ರೈಡ್ ಮಾಡಿದಾಗ ಅಲ್ಲಿ ಬಿರುಕುಗಳು ಸಂಭವಿಸುತ್ತವೆ.
ಅದು ಹೇಗೆ ಎಂಬುದನ್ನು ಯೋಚಿಸಿ, ಉತ್ತರ ಸಿಕ್ಕಿಯೇ ಸಿಗುತ್ತದೆ.