ವಾಷಿಂಗ್ಟನ್: ಇರಾನ್-ಅಮೆರಿಕ ನಡುವಿನ ಯುದ್ಧ ಅಂತ್ಯವಾಗಲಿದ್ದು ಭಾನುವಾರ ಶಾಂತಿ ಒಪ್ಪಂದಕ್ಕೆ ಸಹಿ ಬೀಳಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಹೌದು.. ಮಧ್ಯಪ್ರಾಚ್ಯದ ಯುದ್ಧಕ್ಕೆ ಅಂತ್ಯ ಹಾಡುವ ಬಹುನಿರೀಕ್ಷಿತ ಶಾಂತಿ ಒಪ್ಪಂದಕ್ಕೆ ಭಾನುವಾರ ಸಹಿ ಹಾಕಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಈ ಒಪ್ಪಂದದ ನಂತರ ಜಾಗತಿಕ ವ್ಯಾಪಾರಕ್ಕೆ ಅತ್ಯಂತ ಮಹತ್ವದ ಹೋರ್ಮುಜ್ ಜಲಸಂಧಿ (Strait of Hormuz) ಎಲ್ಲರಿಗೂ ಮುಕ್ತವಾಗಲಿದೆ ಎಂದು ಅವರು ಹೇಳಿದ್ದಾರೆ.
ಶನಿವಾರ ತಮ್ಮ ಟ್ರೂತ್ ಸೋಶಿಯಲ್ (Truth Social) ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಒಪ್ಪಂದಕ್ಕೆ ನಾಳೆ ಸಹಿ ಹಾಕುವ ವೇಳಾಪಟ್ಟಿ ನಿಗದಿಯಾಗಿದೆ. ಒಪ್ಪಂದಕ್ಕೆ ಸಹಿ ಬಿದ್ದ ತಕ್ಷಣ ಹೋರ್ಮುಜ್ ಜಲಸಂಧಿ ಎಲ್ಲ ರಾಷ್ಟ್ರಗಳಿಗೂ ತೆರೆಯಲ್ಪಡುತ್ತದೆ,” ಎಂದು ತಿಳಿಸಿದ್ದಾರೆ.
ಯುರೇನಿಯಂ ಸಂಗ್ರಹ ವಶಕ್ಕೆ ಪಡೆಯುವ ಸೂಚನೆ
ಇದೇ ವೇಳೆ ಅಮೆರಿಕ ಸರ್ಕಾರ ನಾಳೆ ಒಪ್ಪಂದಕ್ಕೆ ಇರಾನ್ ಸಹಿ ಹಾಕಿದ ಬೆನ್ನಲ್ಲೇ ಪರಿಸ್ಥಿತಿ ಶಾಂತವಾದ ಬಳಿಕ ಇರಾನ್‌ನ ಸಮೃದ್ಧ ಯುರೇನಿಯಂ ವಶಕ್ಕೆ ಪಡೆಯಲಾಗುವುದು ಎಂದು ಟ್ರಂಪ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ಟ್ರಂಪ್, ಇರಾನ್‌ನಲ್ಲಿರುವ ಸಮೃದ್ಧ (Enriched) ಯುರೇನಿಯಂ ಸಂಗ್ರಹವನ್ನು ಅಮೆರಿಕ ವಶಕ್ಕೆ ಪಡೆದು ನಾಶಪಡಿಸುವುದಾಗಿ ಹೇಳಿಕೆ ನೀಡಿದ್ದು, “ಸೂಕ್ತ ಸಮಯದಲ್ಲಿ, ಎಲ್ಲವೂ ಶಾಂತವಾದ ನಂತರ, ನಮ್ಮ ಅತ್ಯಾಧುನಿಕ B-2 ಬಾಂಬರ್ ವಿಮಾನಗಳು ಮತ್ತು ಅವುಗಳ ಪ್ರತಿಭಾವಂತ ಪೈಲಟ್‌ಗಳ ನೆರವಿನಿಂದ, ಬಲಿಷ್ಠ ಗ್ರಾನೈಟ್ ಪರ್ವತಗಳ ಆಳದಲ್ಲಿ ಹೂತಿಟ್ಟಿರುವ ಅಣು ಪದಾರ್ಥಗಳನ್ನು ನಾವು ವಶಪಡಿಸಿಕೊಳ್ಳುತ್ತೇವೆ.
ಬಳಿಕ ಅವುಗಳನ್ನು ಇರಾನ್‌ನಲ್ಲೇ ಅಥವಾ ಅಮೆರಿಕದಲ್ಲಿ ನಿಷ್ಕ್ರಿಯಗೊಳಿಸಿ ಸಂಪೂರ್ಣವಾಗಿ ನಾಶಪಡಿಸಲಾಗುತ್ತದೆ,” ಎಂದು ಹೇಳಿದ್ದಾರೆ.
ಒಪ್ಪಂದ ಜಾರಿಯಾಗದಿದ್ದರೆ ಗಂಭೀರ ಪರಿಣಾಮಗಳ ಎಚ್ಚರಿಕೆ
ಇರಾನ್ ಒಪ್ಪಂದದ ಷರತ್ತುಗಳನ್ನು ಸಂಪೂರ್ಣವಾಗಿ ಪಾಲಿಸಬೇಕು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದು, ಇಲ್ಲದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಿದ್ದಾರೆ.
“ಈ ಪ್ರಕ್ರಿಯೆ ವೇಗವಾಗಿ, ಸುಲಭವಾಗಿ ಮತ್ತು ಯಾವುದೇ ಅಡಚಣೆಯಿಲ್ಲದೆ ಪೂರ್ಣಗೊಳ್ಳಲಿದೆ ಎಂಬ ಆಶಾಭಾವವಿದೆ. ಅದು ಸಾಧ್ಯವಾಗದಿದ್ದರೆ, ನಮ್ಮ ಬಳಿ ಅಂತಿಮ ಪರ್ಯಾಯ ಮಾರ್ಗವಿದೆ. ಅದನ್ನು ಮತ್ತೊಮ್ಮೆ ಬಳಸಬೇಕಾದ ಪರಿಸ್ಥಿತಿ ಬರಬಾರದು ಎಂದು ಆಶಿಸುತ್ತೇನೆ,” ಎಂದು ಟ್ರಂಪ್ ಬರೆದಿದ್ದಾರೆ.
“ಭವಿಷ್ಯದಲ್ಲಿ ಇರಾನ್ ಹಾಗೂ ಸಂಪೂರ್ಣ ಮಧ್ಯಪ್ರಾಚ್ಯದೊಂದಿಗೆ ದೀರ್ಘಕಾಲ ಸಹಕಾರದಿಂದ ಕೆಲಸ ಮಾಡುವ ನಿರೀಕ್ಷೆಯಿದೆ,” ಎಂದು ಅವರು ತಿಳಿಸಿದ್ದಾರೆ.
ಇರಾನ್ ಸಹಿ ಹಾಕಲ್ಲ?
ಆದರೆ ಟ್ರಂಪ್ ಅವರ ಈ ಹೇಳಿಕೆ ಬೆನ್ನಲ್ಲೇ ಇದೇ ದಿನ ಇರಾನ್ ವಿದೇಶಾಂಗ ಸಚಿವಾಲಯ ನೀಡಿದ್ದ ಸೂಚನೆಗೆ ವಿರುದ್ಧವಾಗಿದೆ. ರಾಜ್ಯ ಮಾಧ್ಯಮಗಳ ವರದಿ ಪ್ರಕಾರ, ಒಪ್ಪಂದಕ್ಕೆ ಭಾನುವಾರ ಸಹಿ ಹಾಕುವ ಸಾಧ್ಯತೆ ಇಲ್ಲ ಎಂದು ಇರಾನ್ ಸೂಚಿಸಿತ್ತು ಎನ್ನಲಾಗಿದೆ.
ಯುರೇನಿಯಂ ಸಮೃದ್ಧೀಕರಣದ ಹಕ್ಕಿನ ಮೇಲೆ ಇರಾನ್‌ನ ಒತ್ತಾಯ
ಮಾತುಕತೆಗಳ ಅವಧಿಯಿಡೀ ಇರಾನ್ ತನ್ನ ಯುರೇನಿಯಂ ಸಮೃದ್ಧೀಕರಣ (Uranium Enrichment) ಹಕ್ಕನ್ನು ಬಲವಾಗಿ ಸಮರ್ಥಿಸಿಕೊಂಡಿದೆ.
ಅಣುಶಕ್ತಿ ಕಾರ್ಯಕ್ರಮದ ಭಾಗವಾಗಿ ಯುರೇನಿಯಂ ಸಮೃದ್ಧೀಕರಣ ನಡೆಸುವ ಹಕ್ಕು ತನ್ನದಾಗಿದೆ ಎಂಬ ನಿಲುವನ್ನು ಟೆಹ್ರಾನ್ ನಿರಂತರವಾಗಿ ಪ್ರತಿಪಾದಿಸುತ್ತಿದೆ.
ಇದೀಗ ಉಭಯ ದೇಶಗಳ ನಡುವೆ ನಡೆಯುತ್ತಿರುವ ಮಾತುಕತೆಗಳು ಯಾವ ರೀತಿಯ ಅಂತಿಮ ತೀರ್ಮಾನಕ್ಕೆ ಬರುತ್ತವೆ ಎಂಬುದರ ಮೇಲೆ ಜಾಗತಿಕ ಸಮುದಾಯದ ಗಮನ ಕೇಂದ್ರೀಕೃತವಾಗಿದೆ.